ಗುರುವಾರ, ಫೆಬ್ರವರಿ 19, 2009

ಜಾತಿ ವಾದಿಗಳಿಗೆ ಹಿನ್ನೆಡೆಯಾದ ಉತ್ತರ ಪ್ರದೇಶದ ಚುನಾವಣೆ

ನಿನ್ನೆ ಪ್ರಕಟಗೊಂಡ ಉತ್ತರ ಪ್ರದೇಶ ಚುನಾವಣಾ ಪಲಿತಾಂಶ ಭಾರತದ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬವಾಗಿದೆ. ಇಲ್ಲಿಯವರೆವಿಗೂ ಜಾತಿಯ ರಾಜಕಾರಣವನ್ನು ಕಸುಬಾಗಿಸಿಕೊಂಡಿದ್ದ ,ಜಾತಿಯ ನಡುವಿನ ತಾರತಮ್ಯಗಳನ್ನು ಜಾತಿ ವ್ಯವಸ್ಥೆ ಎಂದು ನಿರೂಪಿಸಿ ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ರಾಜಕೀಯ ಪಕ್ಷಗಳಿಗೆ ಮತ್ತು ಜಾತಿವಾದಿಗಳಿಗೆ ಇದು ಅಚ್ಚರಿಯ ಸಂಗತಿಯಾಗಿದೆ. ಏಕೆಂದರೆ, ಇವರ ಪ್ರಕಾರ ಇಂದು ಭಾರತದಲ್ಲಿ ಜಾತಿವ್ಯವಸ್ಥೆ ಬೇರು ಬಿಟ್ಟಿದೆ, ದಲಿತರು ಸಂಪೂರ್ಣ ಶೋಷಣೆಗೊಳಗಾಗಿದ್ದಾರೆ, ಬ್ರಾಹ್ಮಣಶಾಹಿತ್ವ ಈಡೀ ಸಮಾಜವನ್ನು ಸಾಮಾಜಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ ಎಂಬ ನಂಬಿಕೆಗಳಿಗೆ, ಈ ಚುನಾವಣಾ ಪಲಿತಾಂಶ ಬಲವಾದ ಪೆಟ್ಟನ್ನು ನೀಡಿದೆ. ಇಂದು ಮಾಯಾವತಿ ಒಬ್ಬ ದಲಿತ ನಾಯಕಿಯಾಗಿ ಉತ್ತರಪ್ರದೇಶದಲ್ಲಿ ಗಳಿಸಿದ ಜಯಭೇರಿ ನಿಜವಾಗಲೂ ನಮ್ಮ ಜಾತಿ ವ್ಯವಸ್ಥೆ ಕುರಿತಾದ ಚಿಂತನೆಗಳ ದಿಕ್ಕನ್ನು ಬದಲಿಸಿಕೊಳ್ಳಲು ಸಹಕಾರಿಯಾಗಿದೆ. ಒಟ್ಟಾರೆ ಭಾರತದ ಜಾತಿ ವ್ಯವಸ್ಥೆಯ ಮೂಲಭೂತ ಲಕ್ಷಣಗಳಾದ ವರ್ಣವ್ಯವಸ್ಥೆ, ಮೇಲು-ಕೀಳು, ಶುದ್ಧ-ಅಶುದ್ಧ, ಬ್ರಾಹ್ಮಣ- ಅಸ್ಪೃಶ್ಯ ಎಂಬಿತ್ಯಾದಿ ಪೂರ್ವಗ್ರಹಿಕೆಗಳನ್ನು ಹೊಂದಿ ಕಳೆದ ೫೦-೬೦ ವರ್ಷಗಳಿಂದಲೂ ಈ ಹೇಳಿಕೆಗಳನ್ನೇ ಪುನರುಚ್ಚರಿಸುತ್ತಿದ್ದ ಜಾತಿವಾದಿಗಳಿಗೆ ಮತ್ತು ಜಾತಿ ಸಂಘಟನೆಗಳಿಗೆ, ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಂತೆ ಮಾಯಾವತಿಯ ಬಹುಜನ ಸಮಾವಾದಿ ಪಕ್ಷ ಪಡೆದಿರುವ ಜಯ, ಆ ಹಳೆಯ ಸಿದ್ದಾಂತಗಳನ್ನು ಬಿಟ್ಟು ಜಾತಿ ಮತ್ತು ರಾಜಕಾರಣದ ಕುರಿತು ಹೊಸ ರೀತಿಯಲ್ಲಿ ಯೋಚಿಸುವ, ಜ್ಞಾನವನ್ನು ಉತ್ಪಾದಿಸುವ, ಸಮಾಜದ ಸಂಪ್ರದಾಯಗಳನ್ನು ಸರಿಯಾಗಿ ಅರ್ಥೈಸಲು ಮತ್ತು ವ್ಯಾಖ್ಯಾನಿಸಲು ಅನೇಕ ಮಾರ್ಗಗಳನ್ನು ತೆರೆದಿದೆ. ಆದರೆ ನಮ್ಮ ವಿದ್ವಾಂಸರು ಹಳೆಯ ಪೂರ್ವಾಗ್ರಹಗಳಿಂದ ಹೊರಬಂದು ಸಮಾಜವನ್ನು ನೋಡುವ, ಅರ್ಥೈಸುವ ಅಗತ್ಯತೆ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ