ಗುರುವಾರ, ಫೆಬ್ರವರಿ 19, 2009

ನಕ್ಸಲ್ ಹೋರಾಟದ ಗೆಳೆಯರಿಗೆ . .

ಭಾರತದ ಆಂತರೀಕ ಭದ್ರತೆಗೆ ಚೀನಾ ಮತ್ತು ಪಾಕಿಸ್ತಾನ ಧಕ್ಕೆ ತರಲು ಪ್ರಯತ್ನಿಸುತ್ತಿದೆ.. ಎಂಬ ಗುಪ್ತಚರ ವಾರ್ತೆಯ ಹಿಂದೆಯೇ ಅಯೋದ್ಯೇ ರಾಮಜನ್ಮ ಭೂಮಿ ಪ್ರವೇಶಕ್ಕೆ ಪ್ರಯತ್ನಿಸಿ ೬ ಉಗ್ರರ ಹತ್ಯೆಯಾಗಿದೆ. ಅಂತೆಯೇ ಕರ್ನಾಟಕದಲ್ಲಿ ಎನ್‌ಕೌಂಟರ್‌ಗೆ ಒಳಗಾದ ನಕ್ಸಲರ ಕೈಯಲ್ಲಿ ವಿದೇಶಿ ನಿರ್ಮಿತ ಎ. ಕೆ. -೪೭, ಸ್ಟೆನ್‌ಗನ್ ನಂತಹ ಶಸ್ತ್ರಾಸ್ತ್ರಗಳು ಸಿಗುತ್ತಿವೆ, ಹೈದರಾಬಾದ್ ಮಸೀದಿಯಲ್ಲಿ ಬಾಂಬ್ ಸ್ಪೋಟದಿಂದ ೧೨ ಮಂದಿ ಸಾವು, ಹಂಪಿಯಲ್ಲಿ ಉಗ್ರಗಾಮಿಯ ಬಂಧನ, ಮುಖ್ಯವಾಗಿ ಬೆಂಗಳೂರಿನ ಇಮ್ರಾನ್ ಹನೀಷ್, ನಂತಹ ಉಗ್ರಗಾಮಿಗಳು ಬಂಧಿತರಾಗಿದ್ದಾರೆ. ಜೊತೆಗೆ ಬೆಂಗಳೂರು, ಅಹಮದಾಬಾದ್, ಮುಂಬಯಿ ಬಾಂಬ್ ಸ್ಪೋಟಗಳು ಮೆಣಸಿನಹಾಡ್ಯದಲ್ಲಿ ನಕ್ಸಲರು ಮತ್ತು ಪೋಲಿಸರ ನಡುವಿನ ಕಾದಾಟದಲ್ಲಿ ೫ ಮಂದಿಯ ಸಾವು. ಜೊತೆಗೆ ಪಾಕಿಸ್ತಾನ ತಾಲಿಬಾನ್ ಉಗ್ರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ ಇತ್ತಿಚೆಗೆ ನಕ್ಸಲ್ ಜಗನ್ನಾಥನ ಬಂಧನ.
ಕಳೆದ ಕೆಲವು ತಿಂಗಳಿನ ಈ ಎಲ್ಲಾ ಘಟನೆಗಳನ್ನು ಗಮನಿಸಿದರೆ ಆಶ್ಚರ್ಯ, ಭಯ ಎರಡು ಆಗುತ್ತಿವೆ. ಅದಕ್ಕಿಂತ ಮುಖ್ಯವಾಗಿ ನಮ್ಮ ಯುವ ಜನತೆ ಎತ್ತಸಾಗುತ್ತಿದೆ ಎಂಬ ಅತಿ ದೊಡ್ಡ ಪ್ರಶ್ನೆ ನಮ್ಮ ಎದುರಿಗೆ ನಿಲ್ಲುತ್ತದೆ?
ಇಂದು ಭಾರತದಲ್ಲಿನ ಉಗ್ರಗಾಮಿಗಳ ಹತ್ಯಾಕಾಂಡ ಸಂಘಟನೆಗಳ ಮಾತು ಬಿಡಿ. ನಮ್ಮ ಶಾಂತ ಕರ್ನಾಟಕದ ಪರಿಸ್ಥಿತಿ ಏನಾಗಿದೆ. ಏಕೆ ಹೀಗೆ ನಕ್ಸಲಿಸಂ ಚಳುವಳಿ ಹುಟ್ಟಿಕೊಂಡು ಅವು ಕ್ರಾಂತಿಯ ಹಾದಿ ಹಿಡಿದು ರಾಜ್ಯದ ಆಂತರೀಕ ಭದ್ರತೆಗೆ ಧಕ್ಕೆ ತರುತ್ತಿದೆ ಎಂದು ಯೋಚಿಸ ಹೊರಟರೆ ಸಿಗುವ ಉತ್ತರ ಇಂದು ಯುವ ಜನತೆ ಕ್ರಾಂತಿ ಬಯಸುತ್ತಿದೆ. ಒಂದೇ ದಿನ ಇಡೀ ವ್ಯವಸ್ಥೆಯನ್ನು ಕ್ರಾಂತಿಯಿಂದ ಬದಲಿಸಿ ಹೊಚ್ಚ ಹೊಸ ವ್ಯವಸ್ಥೆ ತರುವ ಕನಸು ಕಾಣುತ್ತಿವೆ. ಆದರೆ ಇದು ಸಾಧ್ಯವೇ? ಖಂಡಿತಾ ಇಲ್ಲ. ಯಾವ ಚಳುವಳಿಗೆ ಸಮಾಜದ ವ್ಯವಸ್ಥೆಯ ಬೆಂಬಲ ದೊರಕುವುದಿಲ್ಲವೋ ಅಲ್ಲಿಯವರೆಗೆ ಆ ಚಳುವಳಿ ಯಶಸ್ವಿಯಾಗಲು ಸಾಧ್ಯವಿಲ್ಲ. ಏಕೆಂದರೆ ನಾವು ಸಮಾಜ ಜೀವಿಗಳು ಅದರಲ್ಲಿಯೂ ಒಂದು ವ್ಯವಸ್ಥೆಯ ಒಳಗೆ ಬದುಕುತ್ತಿದ್ದೇವೆ. ಆದರೂ ಕರ್ನಾಟಕದಲ್ಲಿ ನಕ್ಸಲಿಸಂನ ಈ ಒಂದು ರಕ್ತಕ್ರಾಂತಿ ನೋಡುತ್ತಿದ್ದರೆ ಎಲ್ಲೋ ಒಂದು ಕಡೆ ನಮ್ಮ ಯುವ ಜನತೆಯ ಯೋಚನಾ ಲಹರಿ ಬದಲಾಗಬೇಕು ಅನ್ನಿಸುತ್ತದೆ.
ನಕ್ಸಲಿಸಂನ ಮೂಲ ತತ್ವಗಳು ಸಿದ್ದಾಂತಗಳು ಅದರಲ್ಲಿಯೂ ಅವರ ಸಾಮಾಜಿಕ ನ್ಯಾಯ (Soಛಿiಚಿಟ ಎusಣiಛಿe) ಪರಿಕಲ್ಪನೆ ಇಂದು ಅತ್ಯಂತ ಅಗತ್ಯವಾಗಿ ಸಮಾಜಕ್ಕೆ ಬೇಕಾಗಿರುವ ಅಂಶವಾಗಿದೆ. ಆದರೆ ಆ ಒಂದು ಗುರಿಸಾಧನೆಗೆ ಅವರು ಅಳವಡಿಸಿಕೊಂಡಿರುವ ಮಾರ್ಗ ತಪ್ಪಾಗಿದೆ. ನಕ್ಸಲಿಸಂ ಒಂದು ಜನಪರ ಹೋರಾಟವಾಗಬೇಕೇ ಹೊರತು ಪೋಲಿಸ್ ಮತ್ತು ನಕ್ಸಲರ ನಡುವಿನ ಕಾದಾಟವಾಗಬಾರದು. ಈಗ ಕರ್ನಾಟಕದಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗಿದೆ. ನಕ್ಸಲಿಸಂನ ಮೂಲ ತತ್ವಗಳನ್ನು ಅರಿತು ಅದನ್ನು ಮತ್ತು ಆ ಒಂದು ಚಳುವಳಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅಗತ್ಯವಿದೆ ಮತ್ತು ಅದು ಸಾಧ್ಯವಿದೆ.
ಹೇಗೆಂದರೆ .....
ಇಂದು ನಕ್ಸಲರು ಕಾಡಿನಲ್ಲಿ ವಾಸಿಸುತ್ತಾ ಅಲ್ಲಿನ ಜನರಿಗೆ ಸಾಮಾಜಿಕ ತಿಳುವಳಿಕೆ ನೀಡುತ್ತಾ ಅವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಎಂಬುದು ನಿಜ ಅಂತೆಯೇ ಅದೇ ನಕ್ಸಲರು ಯಾರದೋ ಪೋಲಿಸನ ಗುಂಡಿಗೆ ಎದೆಕೊಟ್ಟು ಅನಾಥವಾಗಿ ಸಾಯುತ್ತಿದ್ದಾರೆ. ಮತ್ತು ಅವರ ಸಾವು ಮೊದಲಿನ ರೀತಿ ಸಿಂಪಥಿಗೆ ಒಳಗಾಗುತ್ತಿಲ್ಲ. ಸಾಮಾಜಿಕ ಮನ್ನಣೆ ಪಡೆಯುತ್ತಿಲ್ಲ ಎಂಬುದು ಸತ್ಯವಾಗಿದೆ.
ಆದ್ದರಿಂದ ಇಂದು ಒಂದು ವ್ಯವಸ್ಥೆಯಲ್ಲಿ ಅದು ಗಾಂಧಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ನಾವು ಅದರಲ್ಲಿ ನಕ್ಸಲಿಸಂನಲ್ಲಿ ಗುರುತಿಸಿಕೊಂಡಿರುವ ಯುವಕರು ಏಕೆ ತಮ್ಮ ಒಂದು ಚಳುವಳಿಯನ್ನು ಗಾಂಧಿ ಹಾಕಿಕೊಟ್ಟ ಅಹಿಂಸಾ ಮಾರ್ಗಕ್ಕೆ ತರಬಾರದು ಉದಾಹರಣೆಗೆ ಜೀವದ ಹಂಗು ತೊರೆದು ಹೋರಾಡುತ್ತಿರುವ ಜೀವಕ್ಕೆ ಹೆದರದ ಜನತೆಗಾಗಿ ಅವರ ಸಮಸ್ಯೆಗಳಿಗಾಗಿ ಜೀವ ನೀಡಲು ಸಿದ್ದರಿರುವ ಈ ನಕ್ಸಲರು ಸಮಾಜದಲ್ಲಿನ ಮತ್ತು ಕಾಡಿನ ಗಿರಿಜನರ ಸಮಸ್ಯೆಗಳಿಗಾಗಿ ಒಂದು ಅಹಿಂಸಾತ್ಮಕ ಹೋರಾಟ ಹಮ್ಮಿಕೊಳ್ಳಲಿ. ಯಾವುದಾದರೂ ಜಿಲ್ಲಾಧಿಕಾರಿ ಅಥವಾ ಮುಖ್ಯಮಂತ್ರಿಗಳ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಎಲ್ಲಯವರೆಗೆ ಸರ್ಕಾರ ನಮ್ಮ ಒಂದೂ ಬೇಡಿಕೆ ಮತ್ತು ಸಮಸ್ಯೆಗಳನ್ನು ಈಡೇರಿಸುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಒತ್ತಡಕ್ಕೆ ಮಣಿಯದೆ ಹೋರಾಟ ನಡೆಸಲಿ (ಉದಾ. ಮೇಧಾ ಪಾಟ್ಕರ್) ಅದರಲ್ಲಿ ಉಪವಾಸದಿಂದ ಒಬ್ಬೇ ಒಬ್ಬ ಸತ್ತರು ಸರಿ ಇಡೀ ಸಮಾಜ ಮರುಕ ಪಡುತ್ತದೆ. ಇಡೀ ವ್ಯವಸ್ಥೆ ನಕ್ಸಲಿಸಂನಂತ ಗರ್ವದಿಂದ ನೋಡುತ್ತದೆ. ಏಕೆಂದರೆ ಆ ಸಾವಿಗೆ ಒಂದು ಗುರಿ ಇದೆ. ನಿಜವಾಗಲು ಆತ ಮಹಾತ್ಮನಾಗುತ್ತಾನೆ. ಜೊತೆಗೆ ನಕ್ಸಲಿಸಂ ನಂತಹ ಜನಪರ ಚಳುವಳಿಯನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ. ಇದರಿಂದ ಹೋರಾಟಕ್ಕೆ ಜನ ಮನ್ನಣೆ ದೊರೆತ್ತದೆ. ಹುತಾತ್ಮನಾದ ವ್ಯಕ್ತಿಯ ತಾಯಿ ತನ್ನ ಮಗನ ಸಾವನ್ನು ಹೆಮ್ಮೆಯಿಂದ ಸ್ವೀಕರಿಸುತ್ತಾಳೆ.
ಅದನ್ನು ಬಿಟ್ಟು ಯಾವುದೋ ಕಾಡಿನಲ್ಲಿ ಯಾರ ಮಕ್ಕಳೋ ಏನೋ ಪೋಲಿಸರ ಗುಂಡಿಗೆ ಅನಾಥವಾಗಿ ಸಾಯುವುದು ಎಷ್ಟು ಸೂಕ್ತ? ಜೊತೆಗೆ ರಾಜ್ಯವಿರೋಧಿ ಎಂಬ ಪಟ್ಟಬೇರೆ ಯಾವ ತಾಯಿಯ ಮಗನಾದರೇನು ಸಾವು ಸಾವೇ ಅಲ್ಲವೇ? ಆದರೆ ಆ ಸಾವು ಆ ಬಲಿದಾನ, ತನ್ನ ನಂಬಿಕೆಗೆ ಚಳುವಳಿಗೆ ಹೋರಾಟಕ್ಕೆ ಮುಖ್ಯವಾಗಿ ಸಾಮಾಜಿಕ ಮನ್ನಣೆಗೆ, ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಎಷ್ಟರ ಮಟ್ಟಿಗೆ ಉಪಯೋಗವಾಗಿದೆ ಎಂಬುದು ಮುಖ್ಯ ಅಲ್ಲವೇ ಗೆಳೆಯ.
ಪ್ರತಿ ಬಲಿದಾನವೂ ಅತ್ಯಂತ ಅಮೂಲ್ಯ. ಸಾಮಾಜಿಕ ಸಮಸ್ಯೆಗಳಿಗಾಗಿ ಹೋರಾಡಿ ಬಲಿಯಾದ ನಕ್ಸಲರ ಆ ಎಲ್ಲಾ ಬಲಿದಾನಗಳಿಗೂ ನನ್ನ ನಮನ. ಆದರೆ ಅದರಿಂದ ಸಾಧಿಸಿದ್ದಾರೂ ಏನು? ತಾಯಿಯ ರೋದನೆ, ಕಣ್ಣೀರು, ಅಸಹಾಯಕತೆ ಮಾತ್ರ ಅದಕ್ಕೆ ಗೆಳೆಯರೇ ಒಂದು ವ್ಯವಸ್ಥೆಯನ್ನು ಬದಲಾಯಿಸಲು ಹೊರಟರೆ ನಾವು ವ್ಯವಸ್ಥೆಯಲ್ಲಿ ಬದುಕಿಯೇ ಅದನ್ನು ಬದಲಾಯಿಸಬೇಕು ಎಂಬ ಹಿರಿಯರ ಮಾತು ನೆನಪಿಗೆ ಬರುತ್ತದೆ.
ಮಹಾತ್ಮಗಾಂಧಿ ಸ್ವತಂತ್ರಕ್ಕಾಗಿ ಜೀವ ತೆತ್ತ ವ್ಯಕ್ತಿಗಳನ್ನು ಜನತೆ ಮತ್ತು ಇತಿಹಾಸ ಇಂದು ನೆನಪಿನಲ್ಲಿ ಇಟ್ಟುಕೊಂಡಿದೆ ಎಂದರೆ ಅವರ ಹೋರಾಟ ಮತ್ತು ಬಲಿದಾನಗಳು ಸಮಾಜದ ಮನ್ನಣೆ ಗಳಿಸಿದ್ದವು. ಆದ್ದರಿಂದ ಇಂದಿಗೂ ಅವರ ನೆನಪು ಇದೆ, ಮುಂದೆಯೂ ಇರುತ್ತದೆ ಕೂಡ. ಆದರೆ ಪೋಲಿಸರ ಎನ್‌ಕೌಂಟರ್‌ನಲ್ಲಿ ಸತ್ತ ನಕ್ಸಲರ ಸಾವು? ನಿಜ ಅದು ಬಲಿದಾನವೆ ಆದರೆ ವ್ಯವಸ್ಥೆಯ ಬದಲಾವಣೆಗೆ ಕ್ರಾಂತಿ ಒಂದೇ ಮಾರ್ಗವಲ್ಲ ಗೆಳೆಯ ಅದಕ್ಕಿಂತ ಮುಖ್ಯವಾಗಿ ಹೋರಾಟಕ್ಕೆ ಸಮಾಜದ ಮನ್ನಣೆ ಅಗತ್ಯ. ನಮ್ಮ ಯುವ ಜನತೆ ನಕ್ಸಲಿಸಂ ಈ ನಿಟ್ಟಿನಲ್ಲಿ ಯೋಚಿಸುವ ಅಗತ್ಯತೆ ಇದೆ. ಏಕೆಂದರೆ ಒಂದು ವ್ಯವಸ್ಥೆಯನ್ನು ಬದಲಾಯಿಸಬೇಕು ಅಂದರೆ ನಾವು ಆ ವ್ಯವಸ್ಥೆಯಲ್ಲಿ ಬದುಕಲೇ ಬೇಕು ಅಲ್ಲವೇ ಗೆಳೆಯ. ಎಕೆ ಇದನ್ನೆಲ್ಲ ಬರೆದೆ ಅಂದರೆ ಮೊನ್ನೆ ಬಂಧಿತನಾದ ಜಗನ್ನಾಥನನ್ನು ಕೊರ್ಟ್‌ನಲ್ಲಿ ನೊಡಿದೆ N.S.S ಕ್ಯಾಂಪ್‌ನಲ್ಲಿ ಬನಿಯನ್ ಧರಿಸಿ ನಮ್ಮೊಂದಿಗೆ ಒಡಾಡುತ್ತಿದ್ದ, ಉಣ್ಣುತ್ತಿದ್ದ, ಅಣ್ಣಾ ಎಂದು ಕರೆಯುತ್ತಿದ್ದ ಗೆಳೆಯ ಇವನೇನಾ ಅಂತ ಆಶ್ಛರ್ಯವಾಯಿತು ಜೋತೆಗೆ ಅಲ್ಲಿಯೇ ಇದ್ದ ಅವರ ತಾಯಿಯ ಕಣ್ಣಲ್ಲಿದ್ದ ನೀರ ಹನಿಯು ಅರ್ಥವಾಯಿತು. . .
....... ಯೋಚನಾ ಲಹರಿ ಹೀಗೆ ಮುಂದುವರಿಯುತ್ತಿದೆ. ಅತ್ತ ಮತ್ತೆ ಉಗ್ರರ ಆರ್ಭಟ ಕೇಳಿಸುತ್ತಿದೆ. ಇತ್ತ ಮತ್ತೆ ಮೂರು ಜನ ನಕ್ಸಲರು ಪೋಲಿಸರ ಗುಂಡಿನಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತದೆ. ಮತ್ತೆ ಯಾವ ತಾಯಿ ರೋದಿಸಬೇಕಾಗಿದೆಯೋ? ಮತ್ತು ದೇಶದ ಬಾಹ್ಯ ಶತ್ರುಗಳಾದ ಚೀನಾ ಮತ್ತು ಪಾಕಿಸ್ತಾನ ದೇಶದ ಆಂತರೀಕ ಭದ್ರತೆ ಕದಡಲು ಶಸ್ತ್ರಾಸ್ತ್ರ ಪೂರೈಸುತ್ತಿವೆ ಎಂಬ ಗುಪ್ತ ವಾರ್ತೆ ಬೆಳಕಿಗೆ ಬರುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಬೆಂಗಳೂರಿನಲ್ಲಿ ಬಂಧಿತನಾದ ಉಗ್ರಗಾಮಿ ಇಮ್ರಾನ್ ಮನೆಯಲ್ಲಿ ಆಧುನಿಕ ಅಸ್ತ್ರಗಳು ದೊರೆಯುತ್ತವೆ ಜೊತೆಗೆ ಎನ್‌ಕೌಂಟರ್‌ನಲ್ಲಿ ಸತ್ತ ನಕ್ಸಲರ ಕೈಯಲ್ಲಿ ಎ.ಕೆ. - 47, ಸೈನ್‌ಗನ್, ನಂತಹ ಆಧುನಿಕ ಅಸ್ತ್ರಗಳು ಅನಾಥವಾಗಿ ಬಿದ್ದಿರುತ್ತವೆ. ಅವರಂತೆ .......
ನಿಜವಾಗಲೂ ದೇಶದ ಬಾಹ್ಯ ಶತ್ರುಗಳು ಯುವಕರ ಅಸಹಾಯಕತೆ, ಸಿಟ್ಟು, ಆಕ್ರೋಷ, ನಿರಾಸೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅವರ ಮೂಲಕ ದೇಶದ ಆಂತರಿಕ ಭದ್ರತೆ ಕದಡಲು ಪ್ರಯತ್ನಿಸುತ್ತಿವೆಯೇ? (ಅಸ್ತ್ರಗಳನ್ನು ಸರಬರಾಜು ಮಾಡುವ ಮೂಲಕ) ಎಂಬ ಆಲೋಚನೆಯೇ ಭಯ ಹುಟ್ಟಿಸುವಂತಿದೆ.
ಮನಸ್ಸು ಮತ್ತು ಕಣ್ಣು ಮುಂದಿನ ಬೆಳವಣಿಗೆಗೆ ಕಾಯುತ್ತಿವೆ. ನಮ್ಮ ಯುವಕ ಎಂದು ಈ ನಿಟ್ಟಿನಲ್ಲಿ ಯೋಚಿಸುತ್ತಾನೆ......?

1 ಕಾಮೆಂಟ್‌:

  1. e nimma ನಕ್ಸಲ್ ಹೋರಾಟದ ಗೆಳೆಯರಿಗೆ . . nijavagiyu alavadisikondare samajada sudharane age aguthe annodu nanna anisike. chennagide hige samajakke bekada ennu olleya articles bareyire

    thanks and regards

    Sandesh kumar G.K

    ಪ್ರತ್ಯುತ್ತರಅಳಿಸಿ