ಸೋಮವಾರ, ಆಗಸ್ಟ್ 23, 2010

ನಾನು ಇಷ್ಟಪಟ್ಟ `ದೇಶ ಕಾಲ' ಎರಡರಲ್ಲಿ ಪ್ರಕಟವಾದ ತಮಿಳು ಕಥೆಗಾರ `ಜಯಮೋಹನ್ ಅವರ ಕಥೆ `ವಿಷಸರ್ಪ'

ಬಹುಪಾಲು ಚರಿತ್ರಕಾರರ ಜೊತೆ ಚರಿತ್ರೆಯ ಸೂಕ್ಷ್ಮ ಸಮಸ್ಯೆಗಳ ಕುರಿತು ಚರ್ಚಿಸಲು ಆಗುವುದಿಲ್ಲ. ಅವರು ಖಚಿತ ಮಾಹಿತಿಗಳ ಮೂಲಕ ಅಚ್ಚುಕಟ್ಟಾಗಿ ಸೃಷ್ಟಿಸುವ ಆಕೃತಿಯಂತೆ ಚರಿತ್ರೆಯನ್ನು ಕಲ್ಪಿಸಿಕೊಳ್ಳುತ್ತಾರೆ. ಮನೆ ಜಗುಲಿಯ ಮೇಲೆ ಕುಳಿತು ಮಾತಾಡುವಂತೆ ಚರಿತ್ರೆಯ ಕುರಿತೂ ಚರ್ಚಿಸುತ್ತಾರೆ. ಒಬ್ಬ ಚರಿತ್ರಕಾರನಾಗಿ ನನಗೆ ಇವೆಲ್ಲ ಒಪ್ಪಿಗೆಯಾಗುವುದಿಲ್ಲ. ನಾನು ಚರಿತ್ರೆಯನ್ನು ರಂಗಭೂಮಿಕೆಯ ಹಿನ್ನೆಲೆಯ ಪರದೆಗಳಂತೆ ಕಲ್ಪಿಸಿಕೊಳ್ಳುತ್ತೇನೆ. ದೃಶ್ಯಕ್ಕೆ ತಕ್ಕಂತೆ ಕ್ಷಣಗಳಲ್ಲೆ ಪರದೆ ಬದಲಿಸುತ್ತೇನೆ. ಮನೆಗಳು, ಗುಡ್ಡದ ತಪ್ಪಲು, ಸಮುದ್ರ ತೀರ, ಅರಮನೆಯ ಸಭೆ. ಈ ಕುರಿತು ನಾನು ಯಾವ ಚರಿತ್ರಕಾರರ ಜೊತೆ ಮಾತನಾಡಿದರೂ ಅವರ ಕಣ್ಣು ಕೆಂಪಾಗುತ್ತವೆ. ಇವನೇನೂ ಶಾಶ್ವತ ಸತ್ಯಗಳನ್ನು ಸ್ಥಾಪಿಸುವ ವಿದ್ವಾಂಸನಲ್ಲ, ಕಥೆಗಳನ್ನು ಹೆಣೆಯುವ ಕಲ್ಪನೆಗಳ ವ್ಯಕ್ತಿ ಎಂದು ನಾನು ಮಾತಾಡಿದಾಗ ಅವರು ತಿಳಿಯುತ್ತಾರೆ. ನಾನು ಅವರಲ್ಲೊಬ್ಬರಿಗೆ ನೀವು ಸತ್ಯಗಳನ್ನು ಹೆಣೆಯುವ ಕಲ್ಪನೆಗಳ ವ್ಯಕ್ತಿ ಎಂದಿದ್ದೆ. ಅವರು ತಮ್ಮ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುವಷ್ಟು ಆವೇಶಗೊಂಡು ಕೂಗಾಡಿದರು.

ನಾನೊಂದು ಖಚಿತ ಉದಾಹರಣೆಯೊಂದಿಗೆ ಆರಂಭಿಸುತ್ತೇನೆ. ತಿರ್ಪರಪ್ಪು ಮಹಾದೇವರ ದೇವಸ್ಥಾನ ಈಗ ಹೇಗಿದೆ? ಶೈವ ಧರ್ಮದ ಮುಖ್ಯ ಕೇಂದ್ರಗಳಲ್ಲಿ ಅದೊಂದು. ಕೋಟೆಯಂತೆ ಕಾಣುವ ಸುತ್ತು ಗೋಡೆಗಳ ಒಳಗೆ ಎತ್ತರವಾದ ಮಂಟಪಗಳು, ವಿಸ್ತಾರವಾದ ಪ್ರಾಕಾರ. ತಾಮ್ರದ ಗೋಪುರದ ಗರ್ಭಗುಡಿಯೊಳಗೆ ತೂಗುದೀಪಗಳ ಮತ್ತು ನೆಲಕ್ಕಿಟ್ಟ ಕಂಚಿನ ದೀಪಗಳ ಕಾಂತಿಯಲ್ಲಿ ಹೊಳೆಯುತ್ತಿರುವ ಚಿನ್ನದ ಕವಚ ತೊಟ್ಟು ಕೂತ ಲಿಂಗ. ಐವತ್ತು ವರ್ಷಗಳ ಹಿಂದೆ ಅವಣೀಶಯರು ದೇವಾಲಯದೊಳಗೆ ಮಾತ್ರವಲ್ಲ, ದೇವಾಲಯವಿರುವ ಬೀದಿಯಲ್ಲಿ ಓಡಾಡಲೂ ತಡೆ ಇತ್ತು. ತಪ್ಪಿ ಒಳಗೆ ಬಂದವರನ್ನು ತೆಂಗಿನ ಮರಕ್ಕೆ ಕಟ್ಟಿ, ಜೀವಂತ ಸಾರೆ ಹಾವಿನ ಚರ್ಮದಿಂದ ಇನ್ನಷ್ಟು ಬಿಗಿಗೊಳಿಸಿ ಬಿಸಿಲಲ್ಲಿ ನಿಲ್ಲಿಸುತ್ತಿದ್ದರು. ಹಾವಿನ ಚರ್ಮ ಒಣಗಿ ಆಕುಂಚನಗೊಳ್ಳುವಾಗ ಅದು ಮಾಂಸಖಂಡಗಳನ್ನು ಕತ್ತರಿಸಿ ಇನ್ನಷ್ಟು ಒಳಪ್ರವೇಶಿಸುವುದು. ಇದು ತುಂಬ ಸರಳ ಶಿಕ್ಷೆ. ಇದಕ್ಕಿಂತ ಹೆಚ್ಚಿನ ದಂಡನೆಗಳನ್ನು ಆ ಕಾಲದ ತಾಂತ್ರಿಕ ವಿಧಿಗಳನ್ನೊಳಗೊಂಡ ‘ತಂತ್ರ ಪ್ರಬೋಧಿನಿ’ಯಲ್ಲಿ ಕಾಣಬಹುದು. ಅಧಿಕ ಆದಾಯವಿದ್ದ ಈ ದೇವಸ್ಥಾನದಲ್ಲಿ ಆ ಕಾಲದಲ್ಲಿ ಇಡೀ ವರ್ಷ ಬ್ರಾಹ್ಮಣರಿಗೆ ಉಚಿತ ಭೋಜನ ನೀಡುತ್ತಿದ್ದ ಮೂರು ಅಡಿಗೆ ಮನೆಗಳು ಬಿಡುವಿಲ್ಲದೆ ಕಾರ್ಯನಿರತವಾಗಿರುತ್ತಿದ್ದವು. ನಾಲ್ಕೂ ಕಡೆಗಳಿಂದ ಎತ್ತಿನಗಾಡಿಗಳು ನದಿಯಂತೆ ಬಂದು ಅಲ್ಲಿ ನೆರೆಯುತ್ತಿದ್ದವು. ಬ್ರಾಹ್ಮಣರ ಪ್ರಾಬಲ್ಯ ಅಧಿಕವಾಗಿದ್ದ ಸ್ಥಳವದು.

ಆದರೆ ಚರಿತ್ರೆಯಲ್ಲಿ ಹಿಂದಕ್ಕೆ ನೋಡಿದರೆ ನಾವು ಕಾಣುವುದೇನು? ಶಿಲಾಲೇಖನಗಳು ಮತ್ತು ತಾಮ್ರಪತ್ರಗಳಿಂದ ತಿಳಿಯುವ ಕಥೆ ಬೇರೆ. ಈ ಮಲಯಾಳ ಬ್ರಾಹ್ಮಣರನ್ನು ಚೋಳರಾಜರು ಕಾಗೆ ಗುಂಪನ್ನು ಓಡಿಸುವಂತೆ ಅಟ್ಟಿದರು. ನೂರಾರು ತಂತ್ರ ಪುಸ್ತಕಗಳನ್ನು ಬೆಂಕಿಯಲ್ಲಿ ಸುಟ್ಟು ತಂತ್ರಿಗಳನ್ನು ಕಳುಮರದ ಮೇಲೆ ಹತ್ತಿಸಿದರು. ಅಡಿಗೆ ಮನೆಯ ಊಟ ನಿಲ್ಲಿಸಿ ಹೊಟ್ಟೆಬಾಕರನ್ನು ದೇಶಾಂತರಗೊಳಿಸಿದರು. ಅವುಗಳನ್ನು ತಮ್ಮ ವೀರ ಪ್ರತಾಪಗಳೆಂಬಂತೆ ಚೋಳರು ಶಿಲೆಗಳ ಮೇಲೆ ಕೆತ್ತಿಸಿದರು. ಎಲ್ಲವನ್ನೂ ಕವಿಮಣಿ, ಕೆ.ಕೆ.ಪಿಳ್ಳೈ, ಎ.ಕೆ.ಪೆರುಮಾಳ್ ತುಂಬ ವಿವರವಾಗಿ ಬರೆದಿದ್ದಾರೆ.

ನಾನು ಹೇಳುವುದೇನೆಂದರೆ ಇದಕ್ಕೂ ಮುಂದೆ ಯಾಕೆ ಹೋಗಬಾರದು? ಚರಿತ್ರಕಾರರಿಗೆ ಶಿಲಾಲೇಖನಗಳು, ತಾಮ್ರಪತ್ರಗಳು, ತಾಳೆಯೋಲೆಗಳು ಆಧಾರಗಳು. ಅಯ್ಯಾ, ಇವೆಲ್ಲವೂ ಸ್ಥೂಲ ಸಂಗತಿಗಳು. ಸೂಕ್ಷ್ಮಾತಿಸೂಕ್ಷ್ಮವಾದ ಭಾಷೆಯಲ್ಲಿ ಬರೆಯಲಾದ ಆಧಾರಗಳನ್ನು ಯಾಕೆ ನೀವು ಲೆಕ್ಕಿಸುವುದಿಲ್ಲ? ಅವರು ಏನೂ ಮಾತನಾಡುವುದಿಲ್ಲ. ತಿರ್ಪರಪ್ಪು ಮಹಾದೇವರನ್ನು ಇಂದಿಗೂ ಶಿವನ ಉಗ್ರ ಮೂರ್ತಿ ಎಂದೇ ಕರೆಯುತ್ತಾರೆ. ದೇವಾಲಯದ ಪೋತಿಗಳು ಈ ಕುರಿತು ಹಲವಾರು ಕಥೆಗಳನ್ನು ಹೇಳುವುದುಂಟು. ತ್ರಿಪುರ ಸಂಹಾರವನ್ನು ಮುಗಿಸಿ ಉಗ್ರನಾಗಿಯೇ ತಿರ್ಪರಪ್ಪು ಜಲಪಾತಕ್ಕೆ ಬಂದ ಶಿವನು ತನ್ನ ಹುಲಿಚರ್ಮವನ್ನು ತೆಗೆದಿಟ್ಟ. ಅಲ್ಲಿ ಮೂಡಿದ ಲಿಂಗವಿದು. ಜಲಪಾತದಲ್ಲಿ ಸ್ನಾನ ಮಾಡಿ ಶರೀರ ಮತ್ತು ಹೃದಯ ತಣ್ಣಗಾದ ಮೇಲೆ ಶಿವ ಕೈಲಾಸಕ್ಕೆ ಹೋದ. ಆದರೆ ಹಳೆಯ ತಂತ್ರ ಗ್ರಂಥಗಳಲ್ಲೆಲ್ಲ ಈ ಶಿವಲಿಂಗವನ್ನು ‘ಕಿರಾತ ಮೂರ್ತಿ’ ಎಂದು ಗುರುತಿಸುತ್ತಾರೆ. ದಕ್ಷಿಣ ತಿರುವಿದಾಂಗೂರಿನ ಒಂದೇ ಕಿರಾತ ಮೂರ್ತಿ ಇದು. ಕಿರಾತ ಎಂದರೆ ಬರ್ಬರ ಮನುಷ್ಯ, ವನವಾಸಿ. ಪಾಶುಪತಾಸ್ತ್ರವನ್ನು ಅರಸಿಕೊಂಡು ಹೋದ ಅರ್ಜುನನನ್ನು ಕಿರಾತನ ವೇಷದಲ್ಲಿ ಬಂದ ಶಿವನು ಅಡ್ಡಗಟ್ಟಿ, ಯುದ್ಧ ಮಾಡಿ ಬಳಿಕ ಪಾಶುಪತಾಸ್ತ್ರ ನೀಡುವ ‘ಕಿರಾತ ವೃತ್ತ’ ಎನ್ನುವ ಕಥಕ್ಕಳಿ ಆಟವನ್ನು ಇಲ್ಲಿ ಪ್ರತಿವರ್ಷವೂ ಆಡಲೇಬೇಕು ಎನ್ನುವ ಕಟ್ಟಳೆ ಇದೆ. ಆಟಕ್ಕಾಗಿ ಮೈ ತುಂಬ ಕರಿ ಬಣ್ಣ ಬಳಿದುಕೊಂಡು ಬಿಳಿಯ ಕೋರೆ ಹಲ್ಲು, ಕೆಂಪು ಕಣ್ಣುಗಳು, ಹದ್ದಿನ ರೆಕ್ಕೆಯ ಮಣಿಮುಡಿ ತೊಟ್ಟು ಅಲಲಾ ಎಂದು ಕೂಗುತ್ತ ಓಡಿ ಬರುವ ಕಿರಾತ ವೇಷಧಾರಿಯನ್ನು ರಂಗಭೂಮಿಯಲ್ಲೇ ನಂಬೂದಿರಿ ಬ್ರಾಹ್ಮಣ ವೇಷಧಾರಿ ಕಾಲುಮುಟ್ಟಿ ನಮಸ್ಕಾರ ಮಾಡಿ ಪೂಜಿಸುತ್ತಾನೆ. ಅಂದು ಊರಿಗೆ ಊರೇ ನೆರೆದಿರುತ್ತವೆ. ಕಿರಾತ ಮೂರ್ತಿ ರಂಗಭೂಮಿಗೆ ಬಂದ ಕೂಡಲೇ ಎದ್ದು ನಿಂತು ‘ಹರ ಹರ ಮಹಾದೇವ, ಶಂಭೋ ಮಹಾದೇವ’ ಎಂದು ಕೂಗಿ ನಮಿಸುತ್ತಾರೆ. ರಂಗಭೂಮಿಯಲ್ಲಿ ಅಭಯ, ವರದ ಕರಮುದ್ರೆಗಳೊಂದಿಗೆ ನಿಂತ ಕಿರಾತನ ಕಪ್ಪು ರೂಪವನ್ನು ಮತ್ತು ಜೋಡಿಸಿಟ್ಟ ಚಿಪ್ಪುಗಳಂತಿದ್ದ ಹಲ್ಲುಗಳನ್ನು ಕಂಡಕೂಡಲೇ ನನ್ನ ಕಣ್ಣ ಮುಂದೆ ಪರದೆಯೊಂದು ಕಳಚಿ ಬಿದ್ದಂತೆನಿಸಿತು. ಮೇಲೆ ಹೇಳಿದೆನಲ್ಲ, ಆ ಚರಿತ್ರೆಯ ದರ್ಶನ ನನಗೆ ಲಭಿಸಿದ್ದು ಈ ರೀತಿಯಲ್ಲಿ.

ಆ ನಂತರವೇ ನಾನು ತಂತ್ರ ಗ್ರಂಥಗಳನ್ನು ವಿಸ್ತಾರವಾಗಿ ಓದಿ ತಿರ್ಪರಪ್ಪು ದೇವಾಲಯವ ಕುರಿತು ಸಂಶೋಧನೆ ಆರಂಭಿಸಿದೆ. ಮೊಟ್ಟಮೊದಲಿಗೆ ಗೊತ್ತಾದ ವಿಷಯ, ಎಲ್ಲ ತಂತ್ರ ಗ್ರಂಥಗಳು ಬೇರಾವುದೋ ಮೂಲಗ್ರಂಥದ ಅನುವಾದ ಅಥವಾ ವಿವರಣೆ ಅಥವಾ ಅನುಬಂಧಗಳು. ಆ ಮೂಲಗ್ರಂಥ ಎಂದೋ ನಷ್ಟವಾಗಿದೆ. ಎಂಟು ವರ್ಷಗಳ ಕಾಲ ಅದನ್ನು ಹುಡುಕಿಕೊಂಡು ಅಲೆದಾಡಿದೆ. ತಿರ್ಪರಪ್ಪು ದೇವಾಲಯಕ್ಕೆ ಏಳು ನಂಬೂದಿರಿ ಕುಟುಂಬಗಳವರೇ ತಾಂತ್ರಿಕರು. ಅವರಲ್ಲಿ ಯಾರೂ ಈಗ ದೇವಸ್ಥಾನದ ಕಾರ್ಯಭಾರದಲ್ಲಿಲ್ಲ. ಓದು ಮುಗಿಸಿ ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗಿ ಬೇರೆಯೇ ಆದರು. ಮೂರು ಕುಟುಂಬಗಳು ಸಂಪೂರ್ಣವಾಗಿ ವಿದೇಶಗಳಿಗೆ ಸ್ಥಳಾಂತರಗೊಂಡವು. ಇನ್ನೆರಡು ಕುಟುಂಬಗಳವರಿಗೆ ತಮಗೆ ತಿರ್ಪರಪ್ಪು ದೇವಸ್ಥಾನದಲ್ಲಿ ಹಕ್ಕಿದೆ ಎಂಬುದೂ ತಿಳಿಯದು.

ಹುಡುಕಿ ಅಲೆದಾಡಿ ಕೊನೆಗೆ ಬೆಂಗಳೂರಲ್ಲಿದ್ದ ವಯೋವೃದ್ಧ ಶ್ರೀಧರನ್ ನಂಬೂದಿರಿಪಾಡ್ ಅವರಿಂದ ಒಂದೇ ಒಂದು ಉಪಯುಕ್ತ ಮಾಹಿತಿ ಪಡೆದೆ. ಅವರ ಬಳಿ ಅವರಿಗೆ ಏನೂ ತಿಳಿಯದ ಕೆಲ ತಾಳೆಯೋಲೆಗಳಿದ್ದವು. ಅವು ಅವರ ಮೂಲ ಕುಟುಂಬದ ಕಾಲದಿಂದಲೂ ಇದ್ದವು. ಬೆಂಗಳೂರಿನ ಪುರಾತತ್ವ ಇಲಾಖೆಗೆ ಅವುಗಳನ್ನು ಅವರು ದಾನವಾಗಿ ನೀಡಿದ್ದರು. ಆ ಇಲಾಖೆಗೆ ಹೋಗಿ ಆ ತಾಳೆಯೋಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಿದೆ. ಅವುಗಳಲ್ಲಿ ಬಹುಪಾಲು ತಾಳೆಯೋಲೆಗಳು ನಾನು ಮೊದಲೇ ಓದಿದ್ದವು. ಒಂದು ತಾಳೆಯೋಲೆಯ ಕಟ್ಟು ಬ್ರಾಹ್ಮಿ ಭಾಷೆಯಲ್ಲಿತ್ತು. ಅದನ್ನು ಭಾಷಾತಜ್ಞ ಶಂಕರ ಕುರುಪ್ ಸಹಾಯ ಪಡೆದು ಓದಿದೆ. ನಾನು ಹುಡುಕಿದ್ದು ಸಿಕ್ಕಿತು. ಅದೇ ಮೂಲ ತಂತ್ರಗ್ರಂಥ.

ಅದು ಉತ್ತರದ ಭಾಷೆಗೆ ಅನುವಾದಿಸಿದ ಗ್ರಂಥವೆಂದು ಪೂರ್ತಿ ಓದಿದ ಮೇಲೆ ತಿಳಿಯಿತು. ಆದರೆ ಯಾವ ಭಾಷೆಯಿಂದ ಎನ್ನುವುದು ತಿಳಿಯಲಿಲ್ಲ. ಆ ಭಾಷೆಯ ಕುರಿತು ವಿವರವಾಗಿ ಶೋಧಿಸತೊಡಗಿದೆ. ಸಂಸ್ಕೃತದ ಮಟ್ಟಿಗೆ ಹೇಳುವುದಾದರೆ ಯಾವುದೇ ಅನುವಾದದಲ್ಲಿಯೂ ಮೂಲಭಾಷೆಯ ಹೆಜ್ಜೆ ಗುರುತು ಅಡಗಿರುತ್ತದೆ. ಮೂಲಭಾಷೆ ತಮಿಳೇ ಇರಬಹುದೇ ಎಂಬ ಅನುಮಾನ ಬಲವಾಗತೊಡಗಿತು. ಆದರೆ ತಮಿಳಿನಿಂದ ಅನುವಾದವಾಗಿದ್ದರೆ ಸಹಜವಾಗಿ ಉಂಟಾಗುವ ಸಮಸ್ಯೆಗಳು ಅಲ್ಲಿ ಕಾಣಲಿಲ್ಲ. ನಾನು ಗೊಂದಲಕ್ಕೊಳಗಾದ ಸಂದರ್ಭಗಳಲ್ಲಿ ಮತ್ತೆ ಮತ್ತೆ ತಿರ್ಪರಪ್ಪು ದೇವಸ್ಥಾನಕ್ಕೆ ಹೋಗುವುದುಂಟು. ಅಲ್ಲಿಯ ಯಾವುದಾದರೂ ಒಂದು ಸಂಗತಿ ಅಥವಾ ಆಚರಣೆಯಲ್ಲಿ ಉತ್ತರ ಸಿಕ್ಕೀತೆಂದು ನನ್ನ ಒಳ ಮನಸಿನ ಸೂಚನೆ. ಒಂದು ದೇವಸ್ಥಾನವೆನ್ನುವುದು ವಿಚಿತ್ರವಾದ ಒಂದು ಪುರಾತನ ಗ್ರಂಥ. ಸಾಮಾನ್ಯವಾಗಿ ನಾವು ಅದರ ರಕ್ಷಾಪುಟವನ್ನು ಮಾತ್ರ ನೋಡುತ್ತೇವೆ. ಒಳಗೆ ನಾವು ಅರಿಯದ ಎಷ್ಟೋ ವಿವರಗಳು ಅಡಗಿವೆ. ಆದರೆ ಈ ವಿಷಯ ಮಾತ್ರ ಆಟವಾಡುತ್ತಲೇ ಇತ್ತು.

ಆ ದಿನಗಳಲ್ಲಿ ಒಮ್ಮೆ ದೇವಸ್ಥಾನದ ಶ್ರೀ ಕಾರ್ಯಂ ನಾರಾಯಣ ಪಿಳ್ಳೈ ಅವರ ಬಾಗಿಲ ಬಳಿ ಒಬ್ಬ ಮುದುಕ ಕುಳಿತಿರುವುದನ್ನು ನೋಡಿದೆ. ಹಾರಾಡುವ ಕೂದಲನ್ನು ಬಿಗಿಯಾಗಿ ಕಟ್ಟಿದ ಜುಟ್ಟು, ಕಿವಿಗೆ ಕಟ್ಟಿಗೆಯ ಓಲೆ, ಎಲೆ ಅಡಿಕೆಯ ಕೆಂಬಣ್ಣದ ಬಾಯಿ, ಕೆಂಪು ಕಣ್ಣುಗಳು. ದಾಡಿ, ಮೀಸೆ ಇಲ್ಲ. ಅಂದರೆ ಅವನ ಮುಖದಲ್ಲಿ ಕೂದಲು ಹುಟ್ಟೇ ಇಲ್ಲ. ವಯೋವೃದ್ಧ ಚೀನೀ ಮುಖದಲ್ಲಿ ಕಾಣುವಂತೆ ದಟ್ಟ ನಿರಿಗೆಗಳು - ಮುಖ, ಕತ್ತು ಎಲ್ಲೆಲ್ಲೂ. ಜೊತೆಯಲ್ಲಿ ಒಬ್ಬಳು ಹುಡುಗಿ. ಅವಳು ಸಾಧಾರಣ ಹಳ್ಳಿ ಹುಡುಗಿಯಂತಿದ್ದಳು. ದಟ್ಟ ಕಪ್ಪು ಬಣ್ಣ. ಯಕ್ಷಿಯ ಕಣ್ಣುಗಳು. ನನ್ನನ್ನು ಕಂಡ ಕೂಡಲೇ ವಂದಿಸಿದ ಆ ಮುದುಕ. ಬೆಳಕು ಹೊಳೆಯುವ ತನ್ನ ಎಮ್ಮೆ ಕಣ್ಣುಗಳಿಂದ ತಿರುಗಿ ನೋಡಿ ಹುಡುಗಿ ನಿಶ್ಚಲವಾಗಿ ನಿಂತಳು.

ನಾರಾಯಣ ಪಿಳ್ಳೈ ಒಳಗೆ ಇದ್ದರು. ದೇವಸ್ಥಾನದ ಕಾರ್ಯಾಲಯದಲ್ಲಿ ಮಾತ್ರ ಕಾಣಲು ಸಾಧ್ಯವಿರುವ ಪುರಾತನ ಕುರ್ಚಿ, ಟೇಬಲ್ಲು, ಬೀರು, ಲೋಟದಲ್ಲಿ ಹಾಲಿಲ್ಲದ ಚಹಾ, ಎಲೆ ಅಡಿಕೆಯ ಸಂದೂಕ, ಕೋಳಾಂಬಿ ಬೀಡಿಕಟ್ಟು.

‘ಬಾಗಿಲಲ್ಲಿರುವವರು ಯಾರು?’ ಎಂದೆ.

‘ಬಾಗಿಲಲ್ಲೇ? ಯಾರೂ ಇಲ್ಲವಲ್ಲ’

‘ಯಾರೋ ಒಬ್ಬ ಮುದುಕ...’

‘ಅವನೇ? ಮಲಯನ್. ಅವನಿಗೆ ನೂರಾ ಎಂಬತ್ತು ರೂಪಾಯಿ ಬಿಲ್ ಬಾಕಿ ಇದೆ. ಎಲ್ಲಿ ಸ್ಯಾಂಕ್ಷನ್ ಆಗುತ್ತದೆ? ಸೂಪರಿಂಟೆಂಡೆಂಟ್ ಒರಟು ಮನುಷ್ಯ. ಮಾತಾಡಿದರೆ ಮೈ ಮೇಲೆ ಬೀಳುತ್ತಾನೆ. ಚಹಾ ಕುಡೀತೀರಾ? ಕಹಿ ಚಹಾ’

‘ಅವರಿಗೇನು ಬಿಲ್ಲು?’

‘ಈ ಕಡೆ ಆದಿ ಕಿರಾತ ಮೂರ್ತಿಗೆ ಅವನೇ ತಾನೆ ಪೂಜಾರಿ? ಮೊದಲಿನಿಂದ ಇರುವ ಸಂಪ್ರದಾಯ ಅಲ್ಲವೇ?’ ನಾರಾಯಣ ಪಿಳ್ಳೈ ಚಹಾ ಸುರುವಿಕೊಂಡರು.

‘ಆದಿ ಕಿರಾತ ಮೂರ್ತಿಯೇ? ದೇವಸ್ಥಾನವೇ?’

‘ದೇವಸ್ಥಾನವೇನೂ ಅಲ್ಲ, ನದಿಯ ಆ ದಂಡೆಯಲ್ಲಿ ಕಾಡೊಳಗೆ ಅಶ್ವತ್ಥ ಮರದಡಿ ಲಿಂಗವೊಂದಿದೆ. ಅದರ ಹೆಸರು ಅದು. ಶಾಸ್ತ್ರದ ಪ್ರಕಾರ ಅದೇ ಮೊದಲ ಕಿರಾತ ಮೂರ್ತಿ. ಅಲ್ಲಿ ದಿನನಿತ್ಯ ಪೂಜೆ ಏನೂ ಇಲ್ಲ. ಇಲ್ಲಿ ತಿರುವಾದಿರೈ ಹಬ್ಬ ಆರಂಭಿಸುವಾಗ ಅಲ್ಲಿ ಆಡನ್ನೋ, ಕೋಳಿಯನ್ನೋ ಬಲಿಕೊಟ್ಟು ಪೂಜೆಗೈದು ಶಾಂತಿ ಮಾಡಬೇಕು. ಹಬ್ಬ ಮುಗಿದ ಮೇಲೆ ಅಲ್ಲಿ ಮತ್ತೊಮ್ಮೆ ಪೂಜೆ ಮಾಡಿ ಬಲಿಕೊಟ್ಟು ಮುಗಿಸಬೇಕು. ಎಲ್ಲವೂ ಶಾಸ್ತ್ರ. ಹೇಗೋ ಒಂದು ರೀತಿಯಲ್ಲಿ ನಡೆಯುತ್ತಿದೆ’. ನಾರಾಯಣ ಪಿಳ್ಳೈ ಚಹಾ ಕುಡಿದರು.

‘ತಿರುವಾದಿರೈ ಮುಗಿದು ಎಂಟು ತಿಂಗಳಾಯಿತಲ್ಲವೇ?’

‘ಬಿಲ್ಲಿಗೇನು ಸಮಯ? ಒಳ್ಳೆ ಕಥೆ ಬಿಡಿ. ಸರ್ಕಾರದ ಬಿಲ್ಲು ಅಷ್ಟು ಸರಳವಾಗಿ ಕೈಗೆ ಸಿಗುತ್ತದೆಯೇ? ಹೇಗಾದರೂ ಒಂದು ವರ್ಷ ಆಗುತ್ತದೆ. ಕೆಲವೊಮ್ಮೆ ಚೈತ್ರ ಮಾಸದವರೆಗೆ ಬಿದ್ದಿರುತ್ತದೆ. ಆಡಿಟಿಂಗ್ ಶುರುವಾದ ಮೇಲೆ ಸೂಪರಿಂಟೆಂಡೆಂಟ್ ಓಡಿ ಬರುತ್ತಾರೆ. ಮಲಯನ್ನ ಹಿಡಿಯಪ್ಪಾ, ಲೆಕ್ಕ ಚುಕ್ತಾ ಆಗಿಲ್ಲ ಅಂತ ಆಡಿಟರ್ಗೆ ಗೊತ್ತಾಗಿಬಿಟ್ಟಿದೆ. ಸರ್ಕಾರಿ ಕೆಲಸ ಸರಿಯಾಗಿ ಆಗಬೇಕಲ್ಲವೇ? ಅಂತೆಲ್ಲ ಚಡಪಡಿಸುತ್ತಾರೆ. ಏನು ಮಾಡೋದು?’

‘ಅಲ್ಲಿ ಮಲಯನ್ನೇ ಪೂಜೆ ಮಾಡಬೇಕೆ?’

‘ಹೌದು, ಅದೇ ತಂತ್ರದ ನಿಯಮ. ಬೆಟ್ಟದ ಮೇಲೆ ಮಲಯ ಜಾತಿಯವರು ಈಗಿತ್ತಲಾಗಿ ಕಡಿಮೆಯಾಗುತ್ತಿದ್ದಾರೆ. ಇವನೂ ಹೋದರೆ ಒಬ್ಬ ಕಲ್ಲುಕುಟಿಗ ಇದ್ದಾನೆ, ಅವನೇ ಎಲ್ಲ ಮಾಡಬೇಕು. ಮಹಾರಾಜರು ಇದ್ದ ಕಾಲದಲ್ಲಿ ಮಲಯನ್ ಬೆಟ್ಟದಿಂದ ಇಳಿಯುವಾಗ ಒಬ್ಬ ಚಮಂದನ್ ನಾಯರ್ ಖಡ್ಗ ಮತ್ತು ಛತ್ರಿಯೊಂದಿಗೆ ಅವನನ್ನು ಎದುರುಗೊಂಡು ಕರೆದುಕೊಂಡು ಬರುತ್ತಿದ್ದ. ಅವನಿಗೆ ಪಾದಪೂಜೆಯೂ ಇತ್ತು ಎಂದರೆ ನೋಡಿ, ಹಾಗೆ ಒಂದು ಕಾಲ. ಈ ನೂರಾ ಎಂಬತ್ತು ರೂಪಾಯಿ ಸಾವಿರದ ಒಂಬೈನೂರಾ ಇಪ್ಪತ್ತರಲ್ಲಿ ಮಹಾರಾಜರು ಆಸ್ಥೆವಹಿಸಿ ಭಂಡಾರದಿಂದ ಕೊಡಲು ಏರ್ಪಾಡು ಮಾಡಿದ್ದು. ಆ ಕಾಲದಲ್ಲಿ ಒಬ್ಬ ಪೋಲಿಸನಿಗೆ ತಿಂಗಳ ಸಂಬಳ ಮೂರು ರೂಪಾಯಿ ಎಂದರೆ ನೋಡಿಕೊಳ್ಳಿ. ಈ ಹಣವನ್ನು ಬಂಗಾರ ನಾಣ್ಯಗಳ ರೂಪದಲ್ಲಿ ತಟ್ಟೆಯಲ್ಲಿಟ್ಟು ತೆಂಗಿನಕಾಯಿ, ಹೂವು, ಎಲೆ ಎಲ್ಲ ಸೇರಿಸಿ ಕೊಡುತ್ತಿದ್ದರು. ನಂತರ ನಾಲ್ಕು ತಿಂಗಳುಗಳ ಕಾಲ ಬೆಟ್ಟದಲ್ಲಿ ಒಂದೇ ಸಮನೆ ಕಳ್ಳು, ಮಾಂಸ, ಹಾಡು, ಕುಣಿತ, ತಾಳಮೇಳ. ಅದೆಲ್ಲ ಒಂದು ಕಾಲ. ಈಗ ನೋಡಿ, ಈ ಹಣ ಅವನಿಗೆ ಬೀಡಿ ಖರ್ಚಿಗೂ ಸಾಲದು. ಬಂದು ನಿಂತಿದ್ದಾನೆ.’

‘ಅವರಿಂದ ರಸೀದಿ ತೆಗೆದುಕೊಂಡು ಹಣ ಕೊಡಿ. ಆ ಹಣ ನಾನು ನಿಮಗೆ ಕೊಡುತ್ತೇನೆ’ ಎಂದೆ.

‘ಯಾಕೆ?’

‘ಒಂದು ಕೆಲಸ ಇದೆ.’

‘ಸಂಶೋಧನೆಯೇನು? ನಿಮಗೆ ಹುಚ್ಚು. ಸಂಶೋಧನೆ ಮಾಡಿ ದೊಡ್ಡ ಬಾಂಬೋ, ಅವರೆಕಾಯೀನೋ ಕಂಡು ಹಿಡೀರಿ. ಹಣ ಸಿಗುತ್ತೆ ಅದನ್ನು ಬಿಟ್ಟು ಮಲಯನನ್ನು ಸಂಶೋಧನೆ ಯಾಕೆ ಮಾಡಬೇಕು? ಮಲಯತಿಯನ್ನ ಸಂಶೋಧನೆ ಮಾಡಿದರೆ ಪರವಾಗಿಲ್ಲ, ಅಲ್ಲವೆ?’

ಮಲಯನ್ ನಡುನಡುಗುತ್ತಾ ಹೆಬ್ಬೆಟ್ಟು ಒತ್ತಿ ಹೆಗಲ ಬಟ್ಟೆಯನ್ನು ಮುಂದೊಡ್ಡಿ ಹಣ ಪಡೆದು, ಹಾಗೇ ಹುಡುಗಿಯ ಕೈಯಲ್ಲಿ ಕೊಟ್ಟರು. ಅವಳು ಅದನ್ನು ಅವಸರದಿಂದ ಎಂಜಲೊರೆಸುತ್ತಾ ಎಣಿಸಿದಳು. ವಂದಿಸಿ ಇಳಿದ ಅವರನ್ನು ಹಿಂಬಾಲಿಸಿದೆ.

ಆ ಹುಡುಗಿ ನನ್ನತ್ತ ತಿರುಗಿ ನೋಡಿ ಅವರ ಬಳಿ ಏನೋ ಹೇಳಿದಳು. ಅವರು ಹಣೆಗೆ ಕೈಯಿಟ್ಟು ನನ್ನೆಡೆ ನೋಡಿದರು. ಹತ್ತಿರ ಹೋದೆ, ವಂದಿಸಿದರು.

‘ಮಲಯನ್ನ ಊರು ಯಾವುದು?’ ಎಂದೆ.

‘ದಕ್ಷಿಣದ ಕಡೆ, ಬೆಟ್ಟದ ಮೇಲೆ’ ಎಂದರು. ಕಿವಿ ಸರಿಯಾಗಿ ಕೇಳುತ್ತಿದ್ದುದನ್ನು ನೋಡಿ ಅಚ್ಚರಿಯಾಯಿತು.

‘ಮಲಯನ್ನಿಗೆ ಸಾಕಷ್ಟು ವಯಸ್ಸಾಗಿರಬೇಕಲ್ಲವೇ?’

‘ಹೌದು’ ಎಂದರು ನಗುತ್ತ. ಬಾಯಲ್ಲಿ ಹಲ್ಲುಗಳೂ ಕಂಡವು. ‘ಒಂಬತ್ತು ಕುರಿಂಜಿ ಕಂಡಾಯಿತು. ಹತ್ತು ಕಂಡರೆ ಪೂರ್ತಿ ಅಂತ ಲೆಕ್ಕ.’
‘ನಾನು ದೇವಸ್ಥಾನದ ಬಗ್ಗೆ ತಿಳಿದುಕೊಳ್ಳಲು ಬಂದವನು. ಮಲಯನ್ ನನಗೆ ಸಹಾಯ ಮಾಡಬೇಕು. ಮಲಯನ್ಗೆ ಬೇಕಾದ ಸಹಾಯ ನಾನು ಮಾಡುತ್ತೇನೆ.’

‘ದೇವಸ್ಥಾನದ ಸಂಗತಿಗಳು ನನಗೇನೂ ಗೊತ್ತಿಲ್ಲ. ಪೋತಿಯವರಿಗೋ, ನಂಬೂದಿರಿಯವರಿಗೋ ಗೊತ್ತಿರುತ್ತದೆ’.

‘ಅವೆಲ್ಲ ಕೇಳಿಯಾಯಿತು. ನಾನು ಕೇಳತಾ ಇರೋದು ಆದಿ ಕಿರಾತಮೂರ್ತಿ ಬಗೆಗೆ.’

‘ಅದೇ?’ ಅಂದರು ಮಲಯನ್.

‘ಏನೇನೋ ಕಥೆಗಳು. ಅದು ಶಿವ ತನ್ನ ಹುಲಿಚರ್ಮವನ್ನ ಮೊದಲು ತೆಗೆದಿಟ್ಟ ಸ್ಥಳ. ಆಮೇಲೆ ಅಲ್ಲಿ ಇರುವೆಗಳು ಇದ್ದುದರಿಂದ ಇಲ್ಲಿ ತಂದಿಟ್ಟರು. ಇಲ್ಲಿ ದರ್ಶನ ಮಾಡುವವರು ಬ್ರಾಹ್ಮಣರು, ಅಲ್ಲಿ ಮಲಯರು. ಅದು ಮೊದಲಿನಿಂದ ಇರುವ ಸಂಪ್ರದಾಯ.’

‘ಇದು ಬ್ರಾಹ್ಮಣರು ಹೇಳುವ ಕಥೆಯಲ್ಲವೇ? ನಿಮ್ಮ ಜಾತಿಯಲ್ಲಿ ಇರುವ ಕಥೆ ಏನು?’

‘ನಮ್ಮ ಜಾತಿಯಲ್ಲೂ ಇದೇ ಕಥೆ’ ಎಂದರು ಮಲಯನ್. ಅವರು ಏನನ್ನೂ ಬಚ್ಚಿಟ್ಟ ಹಾಗೆ ಕಾಣಲಿಲ್ಲ.

‘ಈ ಕುರಿತು ಯಾವುದಾದರೂ ಹಾಡು ಇದೆಯೇ?’

‘ಹಾಡೇನೂ ಇಲ್ಲ, ಪೂಜೆ-ಆಚರಣೆಗಳು, ಅಷ್ಟೆ.’

ನಾನು ಬ್ರಾಹ್ಮಿಭಾಷೆಯ ಗ್ರಂಥದಲ್ಲಿದ್ದ ವಿಷಯಗಳನ್ನು ಮಲಯನ್ನಿಗೆ ತಮಿಳಿನಲ್ಲಿ ಹೇಳಿದೆ. ‘ಹಳೆಯ ಕಾಲದಲ್ಲಿ ಇದ್ದ ತಾಂತ್ರಿಕ ಆಚರಣೆಗಳು ಇವೆಲ್ಲ. ಬಲಿಯ ವಿಧಿ, ಮಂತ್ರ ಎಲ್ಲಾ ಅದರಲ್ಲಿವೆ. ಇವೆಲ್ಲಾ ನಿಮ್ಮ ಭಾಷೆಯಲ್ಲಿ ಇವೆಯೇ?’

‘ನಮ್ಮ ಜಾತಿಯಲ್ಲಿ ಹಾಡುಗಳಿವೆ, ಆದರೆ ಪೂಜೆಯ ಹಾಡು ಅಂತ ಯಾವುದೂ ಇಲ್ಲ.’

ಒಂದು ಕೆ.ಜಿ.ಬೆಲ್ಲ, ಮುನ್ನೂರು ಗ್ರಾ ತಂಬಾಕು, ಕಾಲು ಕೆ.ಜಿ. ಉಪ್ಪನ್ನು ಅವರು ತೆಗೆದುಕೊಂಡರು. ಅವರ ಮನೆಯ ಜಾಗವನ್ನು ನಾನು ಕೇಳಿ ತಿಳಿದುಕೊಂಡೆ. ನದಿಯನ್ನು ದಾಟಿ, ಕಳಿಯಲ್ ಬೆಟ್ಟ ಹತ್ತಿ ಅವರು ಕಾಡೊಳಕ್ಕೆ ಹೋದರು.

ನಾನು ಆದಿ ಕಿರಾತ ಮೂರ್ತಿಯನ್ನು ಪ್ರತಿಷ್ಠೆ ಮಾಡಿದ ಜಾಗ ನೋಡಿದೆ. ಆ ರೀತಿಯ ಪ್ರತಿಷ್ಠೆ ದಕ್ಷಿಣ ತಿರುದಿದಾಂಗೂರಿನಲ್ಲಿ ಏನಿಲ್ಲವೆಂದರೂ ಅರ್ಧಲಕ್ಷ ಸ್ಥಳಗಳಲ್ಲಿದೆ. ಮರದಡಿಯಲ್ಲಿ ಕಡೈಕ್ಕಲ್ಲ ಮೇಲೆ ಕೂರಿಸಿದ ಕುತ್ತುಕ್ಕಲ್ಲು. ಚಂದನ, ಕುಂಕುಮದಿಂದ ಲೇಪನಗೊಂಡು, ಅರಳಿಮಾಲೆಯೋ, ತೆಟ್ರಿ ಮಾಲೆಯೋ ತಿಳಿಯಲಾಗದ ಬಾಡಿದ ಮಾಲೆ ಧರಿಸಿ, ಸುತ್ತಲೂ ಬಿದ್ದ ಒಣಗಿದೆಲೆಗಳ ಮಧ್ಯೆ ನೆರಳಿನಲ್ಲಿ ತಣ್ಣಗೆ ಕುಳಿತಿದೆ. ಆ ಪ್ರದೇಶವನ್ನು ದೇವಸ್ಥಾನದ ಎಸ್ಟೇಟ್ ಎಂದು ರಿಜಿಸ್ಟರ್ ಮಾಡಿದ್ದರೂ, ಅದು ಕಾಡೇ. ಕಾಡಿನಲ್ಲಿ ಮಾತ್ರ ಕೇಳಬಹುದಾದ ಸದ್ದು. ಗಾಳಿ ಹಾರುವ ಸದ್ದು. ಕೊಳೆತ ಎಲೆಗಳ ದುರ್ವಾಸನೆ. ಒಣಗಿದೆಲೆಗಳ ಮೇಲೆ ತೆವಳುವ ಪ್ರಾಣಿಗಳ ಭಯ ಹುಟ್ಟಿಸುವ ಸದ್ದು. ತುಂಬ ಸಮಯ ಅಲ್ಲೇ ಕುಳಿತಿದ್ದೆ. ಅಲ್ಲಿಂದ ಕೇವಲ ಒಂದು ಕಿ.ಮೀ. ದೂರದಲ್ಲಿ ದೊಡ್ಡದೊಂದು ಮಂದಿರ, ಅದರ ಸುತ್ತಲೂ ರಥ ಬೀದಿಗಳು, ಮಹಡಿ ಮನೆಗಳು ಇವೆ ಎಂದು ನಂಬಲು ಸಾಧ್ಯವೇ ಇಲ್ಲ. ಅಲ್ಲಿರುವಾಗ ದೇವಸ್ಥಾನದ ಶಬ್ದಗಳಲ್ಲಿ ಒಂದೆಂಬಂತೆ ಕೇಳಿಸುತ್ತಿದ್ದ ಜಲಪಾತದ ಸದ್ದು ಇಲ್ಲಿ ಕಾಡಿನ ದನಿಯೆಂಬಂತೆಯೇ ಕೇಳುತ್ತಿತ್ತು.

ಒಂದು ವಾರದ ನಂತರ ಮಲಯನ್ನನ್ನು ಮತ್ತೆ ಭೇಟಿಯಾದೆ. ನೀಲಿಮಲೈಯ ತುದಿಯಲ್ಲಿ ಮಾತ್ರ ಕಾಡು ಉಳಿದಿವೆ. ನಾಲ್ಕೂ ಕಡೆಗೂ ರಬ್ಬರ್ ಎಸ್ಟೇಟುಗಳು. ರಸ್ತೆಯಿಂದ ನೋಡುವಾಗ ಸೈನಿಕನ ಕ್ರಾಪಿನಂತೆ ಕಾಣುತ್ತಿತ್ತು. ತೊರೆಯೊಂದು ಓಡಿ ಬಂದು ಬಂಡೆಗಲ್ಲಿಗೆ ಢಿಕ್ಕಿ ಹೊಡೆದು ಮಗ್ಗುಲು ಬದಲಿಸುವಲ್ಲಿ ಮಲಯನ್ನ ಗುಡಿಸಲು. ಬಿದಿರಿನ ಗಳು ಹೂಡಿ ನೆಲದಿಂದ ಸ್ವಲ್ಪ ಮೇಲೆ ಕಟ್ಟಿದ ಆ ಗುಡಿಸಲು ತೆಪ್ಪದಂತೆ ಅಥವಾ ದೊಡ್ಡ ಗುಬ್ಬಿ ಗೂಡಿನಂತೆ ತೋರುತ್ತಿತ್ತು. ನಾನು ಹೋದಾಗ ಮಲಯನ್ ಮನೆಯಲ್ಲೇ ಇದ್ದರು. ದುಡಿಗೆ ಬಿಗಿಯಾಗಿ ದಾರ ಕಟ್ಟುತ್ತಿದ್ದರು. ಅವರ ಮೊಮ್ಮಗಳು ಅಥವಾ ಮರಿಮಗಳು ಹೊರಗೆ ಬಂಡೆಯ ಮೇಲೆ ಒಣಕಡ್ಡಿಗಳನ್ನು ಕೂಡಿಸಿ ಬೆಂಕಿ ಒಟ್ಟಿ ಗೆಣಸು ಬೇಯಿಸುತ್ತಿದ್ದಳು. ಮಲಯನ್ನ ಕಿವಿಗಳು ತುಂಬ ಸೂಕ್ಷ್ಮ. ನಾನು ದೂರದಲ್ಲಿದ್ದಾಗಲೇ ಸದ್ದು ಕೇಳಿ ಎದ್ದು ಹಣೆಗೆ ಕೈಯಿಟ್ಟು ದಿಟ್ಟಿಸಿ ನೋಡಿ ನಕ್ಕು ತಲೆಯಾಡಿಸಿದರು. ಜಗುಲಿಯ ಮೇಲೆ ಕುಳಿತ ಬಳಿಕ ಜೇನು ಬೆರೆಸಿದ ನೀರು ಕೊಟ್ಟು ಉಪಚರಿಸಿದರು. ಆಮೇಲೆ ಬಾಳೆಲೆಯ ಮೇಲಿಟ್ಟು ತುಂಡರಿಸಿ ಕೊಟ್ಟ ಹೊಗೆ ಹಾರುವ ಬಿಸಿಗೆಣಸನ್ನು ತಿಂದೆವು. ಮಲಯನ್ ತನ್ನ ಕುಟುಂಬದ ಕಥೆ ಹೇಳಿದರು. ಅವರ ಏಳೂ ಗಂಡು ಮಕ್ಕಳು ಸತ್ತಿದ್ದರು. ಮೊಮ್ಮಕ್ಕಳೆಲ್ಲ ಎಲ್ಲೆಲ್ಲೋ ಚದುರಿ ಹೋದ ಬಳಿಕ ಉಳಿದ ಒಬ್ಬಳೇ ಮೊಮ್ಮಗಳು ಜೇನು ಹುಡುಕಿ ಹೋಗಿದ್ದಾಳೆ. ಅವಳ ಒಬ್ಬಳೇ ಮಗಳು, ಈ ಹುಡುಗಿ ಹೆಸರು ರೆಜಿನಾ.

‘ರೆಜಿನಾನಾ?’ ಅಂದೆ

‘ಹೌದು, ಕ್ರಿಶ್ಚಿಯನ್ ಸ್ಕೂಲಲ್ಲಿ ಓದುತ್ತಾಳಲ್ಲವೇ?’
ಅಂದರು ಮಲಯನ್. ಮಲಯನ್ನ ಮಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಳು. ‘ಗೋಧಿಯೂ, ಹಾಲು ಪುಡಿಯೂ ಸಿಗುತ್ತವೆ. ಕ್ರಿಸ್ಮಸ್ಗೆ ಬಟ್ಟೆಯನ್ನೂ ಕೊಡುತ್ತಾರೆ’ ಅಂದರು ಮಲಯನ್.

‘ಮಲಯನ್ ಮತಾಂತರಗೊಳ್ಳಲಿಲ್ಲವೇ?’ ಅಂದೆ.

‘ನಮಗೆ ಮಂತ್ರ ಪೂಜೆಗೀಜೆ ಎಲ್ಲ ಇದೆಯಲ್ಲ. ಅದರಿಂದ ಮತಾಂತರಗೊಳ್ಳಲಿಲ್ಲ’ ಅಂದರು.

ಆ ದಿನ ರಾತ್ರಿಯವರೆಗೂ ಮಲಯನ್ ಜೊತೆ ಮಾತಾಡಿ ಹೊರಟೆ. ನನಗಾದ ಸಣ್ಣ ಲಾಭ ಎಂದರೆ ಮಲಯನ್ನ ಭಾಷೆಯಿಂದಲೇ ಆ ಮೂಲ ತಾಂತ್ರಿಕ ಗ್ರಂಥ ಅನುವಾದಗೊಂಡಿದೆ ಎಂಬುದು ಖಾತ್ರಿಯಾಯಿತು. ಮಲಯನ್ ಮಾತಾಡಿದ ಭಾಷೆ ತಮಿಳಿನಂತೆಯೇ, ಆದರೆ ತಮಿಳಿಗಿಂತಲೂ ಹಿಂದೆ ಇದ್ದ ಒಂದು ಬಗೆಯ ಹಳೆಯ ಭಾಷೆ. ಅದರ ಹಲವಾರು ನುಡಿಗಟ್ಟುಗಳು ಆ ತಾಂತ್ರಿಕ ಗ್ರಂಥದಲ್ಲಿಯೂ ಇದ್ದವು. ಉದಾಹರಣೆಗೆ ಅಡಿಕೆ ಗೊನೆಯನ್ನು ಅಡಿಕೆ ಕಿವಿ ಎಂದು ಕರೆಯಲಾಗಿದೆ. ತೆಚ್ಚಿ ಹೂ ಮೊಗ್ಗುಗಳನ್ನು ತೆಚ್ಚಿ ಮೂಗು ಎಂದು ಕರೆಯಲಾಗಿದೆ.

ಆದರೆ ಮಲಯನ್ನಿಗೆ ತಾಂತ್ರಿಕ ಗ್ರಂಥದಲ್ಲಿ ಬರೆಯಲಾದ ಯಾವ ಸಂಗತಿಯೂ ತಿಳಿದಿರಲಿಲ್ಲ. ತಿರ್ಪರಪ್ಪು ಸ್ಥಳಪುರಾಣದಲ್ಲಿ ಹೇಳಲಾದ ಕಥೆಗಳನ್ನೇ ಅವರೂ ಹೇಳಿದರು. ಮತ್ತೆ ಮತ್ತೆ ಭೆಟ್ಟಿಯಾಗಿ ಮಾತನಾಡಿದರೂ ಅದನ್ನೇ ಹೇಳುತ್ತಿದ್ದರು. ಕೇಳಿ ಕೇಳಿ ನನಗೆ ಆಯಾಸವೇ ಆಯಿತು ನಾನು ಮಲಯನ್ನ ಬಳಿ ಹೋಗುವುದೂ ಕಡಿಮೆಯಾಯಿತು. ಮುಖ್ಯ ಕಾರಣ ಖರ್ಚು. ನಾನು ಅವರಿಗಾಗಿ ಖರ್ಚು ಮಾಡಲು ಸಿದ್ಧನಿದ್ದೇನೆಂದು ತಿಳಿದ ಬಳಿಕ ಮಲಯನ್ ತಂಬಾಕು, ಬೆಲ್ಲ, ಚಾಪುಡಿಗಳನ್ನು ತಾನಾಗಿ ತರುವುದು ಪೂರ್ತಿಯಾಗಿ ನಿಲ್ಲಿಸಿದರು. ಇದಕ್ಕಿಂತ ಹೆಚ್ಚಾಗಿ ಇವನ್ನೆಲ್ಲ ತಂದು ಕೊಡುವುದು ನನ್ನ ಕರ್ತವ್ಯವೆಂದೇ ಭಾವಿಸತೊಡಗಿದರು. ನಾನು ತಂದು ಕೊಡುವ ಸಾಮಾನುಗಳ ಗುಣಮಟ್ಟ ಪ್ರಮಾಣಗಳ ಬಗೆಗೆ ನನ್ನ ಬಳಿಯೇ ಆಕ್ಷೇಪವೆತ್ತತೊಡಗಿದರು. ಒಮ್ಮೆ ಬೇಕೆಂತಲೇ ಏನನ್ನೂ ಕೊಂಡುಕೊಳ್ಳದೆ ಅವರನ್ನು ನೋಡಲು ಹೋದೆ. ಅವರು ನಾನು ಬಂದುದನ್ನು ಗಮನಿಸಿದಂತೆ ತೋರಿಸಿಕೊಳ್ಳಲಿಲ್ಲ. ಅವರ ಮೊಮ್ಮಗಳು ಮತ್ತು ಮರಿಮಗಳು ಹೊರಗಿನ ಮನುಷ್ಯ ಬಂದರೆ ಅವನೊಡನೆ ಸೈತಾನನೂ ಬರುತ್ತಾನೆ ಎಂಬ ಭಯದಿಂದ ನನ್ನ ಬಳಿ ಮುಖಕೊಟ್ಟು ಮಾತನಾಡುತ್ತಿರಲಿಲ್ಲ.
ಏಳೆಂಟು ತಿಂಗಳ ನಂತರ ಮತ್ತೊಮ್ಮೆ ಮಲಯನ್ನನ್ನು ನೋಡಲು ಹೋದೆ. ಅಷ್ಟರಲ್ಲಿ ತಿರುವಾದಿರೈ ಹಬ್ಬ ಮುಗಿದಿತ್ತು. ಮಲಯನ್ ಭಾಗವಹಿಸುವುದು ಸಾಧ್ಯವಾಗಲಿಲ್ಲವೆಂದು ಇನ್ನೊಬ್ಬ ಮಲಯನ್ ಎಲ್ಲವನ್ನೂ ಮಾಡಿ ಪೂರೈಸಿದ. ಕಂಠಪೂರ್ತಿ ಕುಡಿದು ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿ ಬಂದಿದ್ದ. ಏಳು ಕೋಳಿಗಳನ್ನು ಬಲಿಕೊಟ್ಟು ರಕ್ತವನ್ನು ಲಿಂಗಕ್ಕೆ ಎರೆದು, ಪೂಜೆ ಮಾಡಿ, ತೆಚ್ಚಿ ಹೂವು, ಅರಳಿಹೂವು, ಬಿಲ್ವ ಪತ್ರೆಗಳನ್ನೆಲ್ಲ ಸೇರಿಸಿ ಕಟ್ಟಿದ್ದ ಮಾಲೆಯಿಂದ ಲಿಂಗವನ್ನು ಅಲಂಕರಿಸಿದ. ಎರಡು ಸಲ ಕಾಲು ಜಾರಿ ಲಿಂಗದ ಮೇಲೆ ಕೈಯೂರುವಂತಾಯಿತು. ನಾನೂ, ನಾರಾಯಣ ಪಿಳ್ಳೈಯೂ, ವಾಲಗದವರೂ ಮಾತ್ರವೇ ಸಾಕ್ಷಿ. ಮಲಯನ್ನಿಗೆ ಆರೋಗ್ಯ ಸರಿ ಇಲ್ಲವೆಂದು ನಾರಾಯಣ ಪಿಳ್ಳೈಯೇ ಹೇಳಿದರು. ‘ಸತ್ತರೂ ಸಾಯಬಹುದು. ಹಳೇ ಕೊರಡು’ ಎಂದರು. ಸರಿ, ಹೋಗಿ ನೋಡೋಣವೆಂದು ಹೊರಟೆ. ಸತ್ತರೂ ಸತ್ತಿರಬಹುದೆಂಬ ಸಂದೇಹದೊಂದಿಗೆ ನಡೆದೆ. ಆದರೂ ಹಾಗೆಲ್ಲ ಸಾಯುವವರಲ್ಲ ಎಂದೂ ಅನಿಸುತ್ತಿತ್ತು. ಗುಡಿಸಲಲ್ಲಿ ಮಲಯನ್ ಇರಲಿಲ್ಲ. ಆ ಹುಡುಗಿ ಮಾತ್ರ ಇದ್ದಳು. ‘ಅಜ್ಜ ಬೆಟ್ಟಕ್ಕೆ ಹೋಗಿದ್ದಾನೆ’ ಎಂದಳು.

‘ಎಲ್ಲಿ?’

‘ಬೆಟ್ಟದ ಅಪ್ಪಚ್ಚಿಗೆ ಬಲಿಕೊಡಲು’

‘ಎಲ್ಲಿಗೆ?’

ಅವಳು ಕೆಳಕ್ಕಿಳಿದು ‘ಅದೋ, ಆ ಬೆಟ್ಟದಲ್ಲಿ’ ಎಂದು ತೋರಿಸಿದಳು.

ಆ ದಿನ ತಂಪಾದ ವಾತಾವರಣವಿತ್ತು. ಗಾಳಿ ತಣ್ಣಗಿತ್ತು. ಆದರೆ ತೇವ ಇರಲಿಲ್ಲ. ನಾನು ಬಹುದೂರದವರೆಗೂ ಲಾರಿಯಲ್ಲಿ ಬಂದುದರಿಂದ ಅಷ್ಟೇನೂ ದಣಿದಿರಲಿಲ್ಲ. ಆದ್ದರಿಂದ ಆ ಬೆಟ್ಟದತ್ತ ಉತ್ಸಾಹದಿಂದ ನಡೆಯತೊಡಗಿದೆ. ತೊರೆಯ ಬಳಿ ನಿಂತು ನೋಡಿದಾಗ ಆ ಬೆಟ್ಟ ತುಂಬ ಹತ್ತಿರವಿದ್ದಂತೆಯೂ, ತೀರ ಮರಗಳಿಲ್ಲದಂತೆಯೂ ಕಂಡಿತ್ತು. ಒಂದು ತಾಸು ನಡೆದ ಬಳಿಕ ಎರಡೂ ತಪ್ಪೆಂದು ತಿಳಿಯಿತು. ಮರಗಳು ಒಂದಕ್ಕೊಂದು ರೆಂಬೆ ಕೈ ಜೋಡಿಸಿ ಬೆರಳುಗಳನ್ನು ಹೆಣೆದು ನಡು ಬಳಸಿ ನಿಂತಿದ್ದವು. ಸುಕ್ಕುಗೊಂಡ ಕೂದಲಂತೆ ಮುಳ್ಳುಗಿಡಗಳು ಬಳ್ಳಿಗಳು ಒಂದಕ್ಕೊಂದು ಹೆಣೆದು ದಾರಿಗೆ ಅಡ್ಡವಾಗಿದ್ದವು. ಮಧ್ಯದಲ್ಲಿ ಬೈತಲೆಯಂತೆ ರಸ್ತೆ ಇತ್ತು.

ಎರಡು ಸ್ಥಳಗಳಲ್ಲಿ ತೊರೆ ನೀರು ಕುಡಿದು, ಕುಳಿತು ವಿಶ್ರಮಿಸಿ ಮುಂದೆ ಹೋದೆ. ಮಲಯನ್ನನ್ನು ಈ ಕಾಡಲ್ಲಿ ಹೇಗೆ ಕಂಡುಹಿಡಿಯುವುದೆಂಬ ಸಂದೇಹ ಉಂಟಾಯಿತು. ಆದರೆ ಈ ದಾರಿ ಆ ದೈವೀ ಪ್ರತಿಷ್ಠೆಯತ್ತ ಹೋಗುವುದಕ್ಕಾಗಿಯೇ ಮಾಡಿದ್ದು ಎಂದೂ ಅನಿಸುತ್ತಿತ್ತು. ದಣಿದು ಕುಳಿತವನು ಕೆಂಪಾದ ಕಿವಿಗಳು ತಣ್ಣಗಾಗುತ್ತಿರುವುದನ್ನು ಅನುಭವಿಸುತ್ತ ನಿರುದ್ದಿಶ್ಯವಾಗಿ ಕಾಡಿನತ್ತ ನೋಡಿದಾಗ ಆ ಕಿರುಪ್ರತಿಷ್ಠೆ ಕಾಣಿಸಿತು. ಎದ್ದು ನಿಂತು ದಿಟ್ಟಿಸಿ ನೋಡಿದೆ. ಒಂದು ಸಣ್ಣ ಕಲ್ಲನ್ನು ಅಗಲವಾದ ಕಲ್ಲಿನ ಮೇಲೆ ಇಡಲಾಗಿತ್ತು. ಬಹುಪಾಲು ಶಿವಲಿಂಗ. ಆದರೆ ಹಲವು ವರ್ಷಗಳಿಂದ ಯಾರೂ ಸ್ಪರ್ಶಿಸಿಯೇ ಇಲ್ಲವೇನೋ ಎಂಬಂತೆ ಪಾಚಿಗಟ್ಟಿ, ಗಿಡ ಬಳ್ಳಿಗಳಿಂದ ಆವೃತವಾಗಿ, ಒಣಗಿದೆಲೆಗಳಿಂದ ಮುಚ್ಚಿ ಹೋಗಿತ್ತು. ಹತ್ತಿರದ ಹಳ್ಳದಲ್ಲಿ ಗಿಡಗಳು ದಟ್ಟವಾಗಿ ಬೆಳೆದು ಪುಟ್ಟ ಬಿಳಿಯ ಹೂಗಳು ಅರಳಿದ್ದವು. ಸಾವಿರ ವರ್ಷದ ಜಿಗಣೆ ಲಿಂಗದ ಮೇಲೆ ಚಲಿಸುತ್ತಿತ್ತು. ಅಲ್ಲೊಂದು ದೊಡ್ಡ ಅಶ್ವತ್ಥ ಮರವೂ ನಿಂತಿದ್ದಿರಬಹುದೆಂದು ಊಹಿಸಿದೆ. ಆ ಮರ ಒಣಗುತ್ತಿರಬಹುದು. ಶಿವಲಿಂಗ ಒಣಗುವುದಿಲ್ಲ.

ಮತ್ತೆ ನಡೆಯತೊಡಗಿದೆ. ನನ್ನ ಕಣ್ಣುಗಳು ಸ್ವೇಚ್ಛೆಯಾಗಿ ಹುಡುಕಾಡತೊಡಗಿದವು. ದಾರಿ ಬದಿಯಲ್ಲಿ ಅದರಂತೆಯೇ ಇದ್ದ ಏಳೆಂಟು ಶಿವಲಿಂಗಗಳನ್ನು ಕಂಡೆ. ಹಾಗಾದರೆ ಕಾಡೊಳಗೆ ಇನ್ನೂ ಹಲವಾರು ಇರಬಹುದು. ಮರಗಳಂತೆ ಅಥವಾ ಹುಗಿದ ಬೇರುಗಳಂತೆ ಮಣ್ಣೊಳಗೆ ಇನ್ನೂ ಸಾವಿರಾರು ಲಿಂಗಗಳು ಹುದುಗಿರಬಹುದು. ಕೊನೆಗಾಣದ ಅಶಾಂತತೆ ಉಂಟಾಯಿತು.

ನನಗೆ ಮಲಯನ್ ಸಿಗುವ ಹೊತ್ತಿಗೆ, ಅವರು ಪೂಜೆ ಮುಗಿಸಿದ್ದರು. ವಿಶಾಲವಾಗಿ ಹರಡಿ ಬೆಳೆದಿದ್ದ ವೇಂಗೈ ಮರದಡಿಯಲ್ಲಿ ಇಟ್ಟ ಆ ಕಲ್ಲುಗಳು ಒಂದೇ ಹೊತ್ತಿಗೆ ದೊಡ್ಡ ಶಿವಲಿಂಗದಂತೆಯೂ ಬರಿಯ ಕಲ್ಲುಗಳಂತೆಯೂ ತೋರುತ್ತಿದ್ದವು. ಮಲಯನ್ ಮರದ ಬೊಡ್ಡೆಗೆ ತಲೆ ಚಾಚಿ ಮಲಗಿದ್ದರು. ಮರ ಹತ್ತುವಾಗ ರಕ್ಷಣೆಗೆ ಸುತ್ತಿಕೊಳ್ಳುವಂತೆ ಧರಿಸಿದ್ದ ಗಲೀಜು ವಸ್ತ್ರ ಕೊರಳಲ್ಲಿತ್ತು. ನಡುವಲ್ಲಿ ಕೆಂಪು ವಸ್ತ್ರ ಕಟ್ಟಿದ್ದರು. ತಲೆಯ ಮೇಲಿದ್ದ ತೆಚ್ಚಿ ಹೂಮಾಲೆ ದಿಟ್ಟಿಸಿ ನೋಡಿದಾಗ ಕಂಡಿತು. ಹತ್ತಿರ ಹೋಗಿ ‘ಮಲಯ’ ಎಂದೆ.

ಅವರು ತಮ್ಮ ಕೆಂಪು ಕಣ್ಣಗಳನ್ನು ತೆರೆದು ನನ್ನತ್ತ ನೋಡಿದರು. ಮತ್ತೆ ಕಣ್ಣು ಮುಚ್ಚಿದರು. ನಾನು ಸ್ವಲ್ಪ ದೂರದಲ್ಲಿ ದೊಡ್ಡ ಬೊಡ್ಡೆಯೊಂದರ ಮೇಲೆ ಕುಳಿತೆ. ಕಾಡಿನ ಮಣ್ಣಿನಂತೆ ಶರೀರ. ಬೇರಿನಂತೆ ನರಗಳು. ಕುತ್ತಿಗೆಯ ವಸ್ತ್ರ ಕೂಡ ಯಾವುದೋ ಬೇರಂತೆಯೇ ಇತ್ತು. ಅವರ ಕಪ್ಪು ಬಣ್ಣ ಕಾಡಿನೊಂದಿಗೆ ಸಹಜವಾಗಿ ಹೊಂದುವಂತಿತ್ತು. ನನ್ನ ತಿಳಿ ನೀಲಿ ಬಣ್ಣದ ವಸ್ತ್ರ ಮತ್ತು ಮೈಬಣ್ಣ ಬೇರೆ ಎಂಬಂತಿತ್ತು. ಈಗ ಇಲ್ಲಿಗೇನಾದರೂ ಒಂದು ಆನೆ ಬಂದರೆ ಅದು ನನ್ನನ್ನೇ ಹಿಡಿದು ಹೇನಿನಂತೆ ಚಟ್ಗೊಳಿಸೀತು. ಆನೆಗೆ ಬಿಳಿ ಬಣ್ಣ ಇಷ್ಟವಾಗದು. ಅದರಿಂದಲೇ ಕಾಡಿಗೆ ಕಟ್ಟುವ ತಡೆಗೋಡೆಗಾಗಲೀ, ತಡೆ ಬಾಗಿಲಿಗಾಗಲೀ ಬೂದಿ ಬಣ್ಣ ಬಳಿಯುವುದು. ಹಾಗಿದ್ದರೂ ಆನೆ ಅಸಹನೆಯಿಂದ ಅವುಗಳನ್ನು ನಾಶ ಮಾಡಲೆತ್ನಿಸುತ್ತದೆ. ಕಾಡಲ್ಲದ ಎಲ್ಲವನ್ನೂ ಅದು ದ್ವೇಷಿಸುವುದು.

ಮಲಯನ್ ಎದ್ದು ಕೂತಾಗ ತೊಡೆಯ ಮೇಲೆ ಜಾರಿ ಬಿದ್ದ ಕೊರಳ ವಸ್ತ್ರ ಬಳುಕುತ್ತಿತ್ತು. ಮತ್ತೆ ಎತ್ತಿ ಸುತ್ತಿಕೊಂಡು ನಡೆಯತೊಡಗಿದರು. ನಾನು ಹಿಂದೆಯೇ ನಡೆದೆ. ಬಹುಪಾಲು ಓಡಿದೆ. ಅವರ ಮನಸ್ಥಿತಿ ಬದಲಿಸಲೆಂದು ‘ಸಾಮಾನುಗಳನ್ನು ಮನೆಯಲ್ಲಿ ಕೊಟ್ಟಿದ್ದೇನೆ’ ಎಂದೆ. ಆದರೆ ಅವರಿಗೆ ಕೇಳಿಸಿದಂತೆ ತೋರಲಿಲ್ಲ.

ನಾನು ಬಂದ ದಾರಿಯ ವಿರುದ್ಧ ದಿಕ್ಕಿನಲ್ಲಿ ಮಲಯನ್ ನಡೆದರು. ಮಲಯನ್ ಮನೆಯ ಬಳಿ ಹರಿಯುವ ತೊರೆ ಅಲ್ಲಿಂದಲೇ ಕಂಡಿತು. ಅದು ನೂರಾರು ಅಡಿ ಆಳದಲ್ಲಿ ಬಿದ್ದ ಬೆಳ್ಳಿ ಜರಿಯಂತೆ ತೋರಿತು. ನೀಲಿಯ ವಿಭಿನ್ನ ಬಣ್ಣಗಳಲ್ಲಿ ಸಣ್ಣ ಸಣ್ಣ ಗುಡ್ಡಗಳು. ಅಗಸ್ತ್ಯ ಗುಡ್ಡ ಕೂಡ ತಿಳಿ ನೀಲಿ ಪರದೆ. ಗುಡ್ಡಗಳೇ ಬಗೆ ಬಗೆಯ ಪರದೆಗಳು. ಸರಸರ ಪರದೆ ತೆಗೆದರೆ ಏನು ಕಾಣಿಸುವುದು?

‘ಇದು ಅಡ್ಡದಾರಿಯೇ?’ ಎಂದೆ, ಮಲಯನ ಬಳಿ.

ಅವರು ಉತ್ತರಿಸದೆ ಬಿದಿರು ಮರಗಳ ಒಳ ಹಾದಿಯಲ್ಲಿ ನಡೆದರು. ಬೇಗ ಬೇಗ ಕತ್ತಲಾವರಿಸತೊಡಗಿತು. ತಲೆಯ ಮೇಲೆ ಬಿದಿರೆಲೆಗಳ ಹಸಿರು ಕತ್ತಲು, ಇಕ್ಕೆಲಗಳಲ್ಲೂ ಬಿದಿರುಗಳ ಹಸಿರು ಗೆರೆ ಗೋಡೆ.

‘ಈ ಪ್ರತಿಷ್ಠೆಯೇ ನಿಮ್ಮ ಕುಲ ದೇವತೆಯೇ?’ ಎಂದು ಕೇಳಿದೆ.

ಮಲಯನ್ ಅದಕ್ಕೂ ಉತ್ತರಿಸಲಿಲ್ಲ, ನನ್ನನ್ನು ಆಗಷ್ಟೇ ನೋಡುವಂತೆ ತಿರುಗಿ ನೋಡಿದರು. ಬಿದಿರುಕಾಡಲ್ಲಿ ಬಿದಿರುಗಳ ತಿಕ್ಕಾಟದಿಂದ ಹುಟ್ಟಿದ ಸದ್ದು ಗಾಳಿಯಲ್ಲಿ ಬಗೆಬಗೆಯ ದನಿಗಳನ್ನು ಸೃಷ್ಟಿಸುತ್ತಿತ್ತು. ನೋವಿಂದ ಮುಲುಗುವಂತೆ, ಗರ್ಜಿಸುವಂತೆ ಅಬ್ಬರಿಸುವಂತೆ. ಮಲಯನ್ನ ಕಣ್ಣುಗಳಲ್ಲಿ ನನ್ನನ್ನು ಗುರುತಿಸಿದ ಲಕ್ಷಣವೇ ಇಲ್ಲ. ಮೃಗವೊಂದರ ದೃಷ್ಟಿ. ಇಲ್ಲ, ನಾನೇ ಮೃಗವೇ?
ದನಿಯೆತ್ತುವುದೇ ಸಾಹಸವೆನಿಸಿತು. ಆದರೂ ಮಾತಾಡಬಯಸಿದೆ. ಮಾತಾಡಿದರೆ ಮಾತ್ರವೇ ಸನ್ನಿವೇಶ ಸಡಿಲಗೊಳ್ಳುವುದು ಸಾಧ್ಯ. ‘ಈ ದೇವರು ಯಾರು?’ ಎಂದೆ. ಮಲಯನ್ ಮುಖ ತಿರುಗಿಸಲಿಲ್ಲ. ಆದರೆ ಅವರ ಹಿಂದಿದ್ದ ನಾನು ಆ ದನಿಯನ್ನು ಕೇಳಿದೆ. ‘ನಾನೇ’.

ನನ್ನ ಶರೀರ ತಣ್ಣಗಾಗಿ ಕಂಪಿಸುತ್ತಿದ್ದ ಕ್ಷಣದಲ್ಲಿ ಹಲವಾರು ಕಡೆಗಳಿಂದ ಹಲವು ಬಗೆಯ ದನಿಗಳಲ್ಲಿ ಅದೇ ಶಬ್ದ ಮತ್ತೆ ಮತ್ತೆ ಪ್ರತಿಧ್ವನಿಸಿತು.

ನಾನು ಹಿಂದಿರುಗಿ ಓಡಿ ದಾರಿಯಲ್ಲಿ ಬಿದ್ದು ಎದ್ದು... ಸಿಟ್ರಂಬಲಂ ಎಂಬ ಜಾಗಕ್ಕೆ ಬಂದು ಬಿದ್ದೆ. ಲಾರಿಯವರು ಊರಿಗೆ ಸಾಗಿಸಿದರು. ನನ್ನ ಸ್ನೇಹಿತರು ‘ಮನೋಭ್ರಮೆ’ ಎಂದರು. ಕಾಡಲ್ಲಿ ಹಲವಾರು ಧ್ವನಿಗಳು ಕೇಳಬಹುದು. ಇರಬಹುದು, ಎಷ್ಟೆಷ್ಟೋ ರೀತಿ ಚರ್ಚಿಸಬಹುದು. ವಿವರಿಸಲೂಬಹುದು. ಎಲ್ಲವೂ ಭ್ರಮೆಯೇ. ಆ ಕ್ಷಣದಲ್ಲಿ ಮಲಯನ್ ಕತ್ತಲ್ಲಿ ಸುತ್ತಿದ್ದ ಗಲೀಜು ವಸ್ತ್ರ ಹೆಡೆಯೆತ್ತಿ ಕಣ್ಣುಗಳನ್ನೂ, ಎರಡು ನಾಲಗೆಗಳನ್ನೂ ತೋರಿ ‘ಭುಸ್’ ಅಂದಿದ್ದು ಕೂಡ.

1 ಕಾಮೆಂಟ್‌:

  1. ಕತೆ ಅದ್ಭುತವಾಗಿದೆ. ಚಿತ್ರವತ್ತಾಗಿದೆ. ಖುಷಿಯಾಯಿತು. ಮನಸ್ಸಿಗೆ ಹಿತವಾಯಿತು. ಇದು ಕತೆಯಲ್ಲ ಅಂದುಕೊಂಡವನಿಗೆ ಕಡೆಯಲ್ಲಿ ಕತೆಯೇ ತೆರೆದು ಸ್ವಾಹ ಮಾಡಿಬಿಟ್ಟಿತು.
    ಇಂತಹ ಕತೆ ಬರೆದವರು ನೂರಾರು ಅಪರೂಪದ ಕತೆಗಳನ್ನು ಕನ್ನಡಕ್ಕೆ ಕೊಡುವಂತಾಗಲಿ.

    ಪ್ರತ್ಯುತ್ತರಅಳಿಸಿ